ಬೆಳಗಾವಿ: ಕೋವಿಡ್-19 ಹಿನ್ನೆಲೆ, ಕಳೆದ ಒಂದೂವರೆ ವರ್ಷದಿಂದ ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಹಲವು ದಿನಗಳಿಂದ ಗಡಿಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದ್ದು, ಪಾಸಿಟಿವಿಟಿ ದರವೂ ಸಹ ಶೇ.1ಕ್ಕಿಂತ ಕಡಿಮೆ ಇದೆ. ಹಾಗಾಗಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಸವದತ್ತಿಯ ಯಲ್ಲಮ್ಮ ದೇವಸ್ಥಾನ ಆರಂಭಿಸಬೇಕೆನ್ನುವ ಒತ್ತಾಯ ಕೇಳಿಬರುತ್ತಿದೆ.
ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಆದಿಶಕ್ತಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವೂ ಒಂದು. ಕರ್ನಾಟಕಕ್ಕಿಂತ ಮಹಾರಾಷ್ಟ್ರದ ಭಕ್ತರೇ ಹೆಚ್ಚಾಗಿ ಇಲ್ಲಿ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ವಿಪರೀತವಾದ ಹಿನ್ನೆಲೆ, 2020ರ ಮಾ.23ರಂದು ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿತ್ತು. ಅಂದಿನಿಂದ 10 ತಿಂಗಳ ಕಾಲ ನಿರ್ಬಂಧ ಮುಂದುವರೆಸಲಾಗಿತ್ತು.
ಕೋವಿಡ್ ಹಾವಳಿ ತಗ್ಗಿದ್ದರಿಂದ 2021ರ ಫೆ.1ರಂದು ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅನುಮತಿ ನೀಡಲಾಗಿತ್ತು. ಆದರೆ, ಕೋವಿಡ್ ಆರ್ಭಟಿಸಿದ್ದರಿಂದ 20 ದಿನಗಳಲ್ಲಿ ಮತ್ತೆ ದೇವಸ್ಥಾನಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಒಟ್ಟಾರೆ ಕಳೆದ 18 ತಿಂಗಳಲ್ಲಿ 20 ದಿನಗಳಷ್ಟೇ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅನುಮತಿ ನೀಡಲಾಗಿದೆ. ಈಗಲೂ ನಿರ್ಬಂಧ ಮುಂದುವರೆದಿದೆ.
ಕಂಗಾಲಾದ ಸಾವಿರಾರು ಕುಟುಂಬಗಳು:
ಯಲ್ಲಮ್ಮನಗುಡ್ಡದಲ್ಲಿ ತೆಂಗಿನಕಾಯಿ, ಕುಂಕುಮ-ಭಂಡಾರ, ಬಾಳೆಹಣ್ಣು, ಸೀರೆ-ಕುಪ್ಪಸ, ಬಳೆಗಳು, ಮಿಠಾಯಿ ಮಾರುತ್ತಲೇ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿವೆ. ಅವರ ಪಾಲಿಗೆ ಯಲ್ಲಮ್ಮನಗುಡ್ಡವೇ ಆಧಾರ. ಆದರೆ, ಒಂದೂವರೆ ವರ್ಷದಿಂದ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅನುಮತಿ ನೀಡದಿದ್ದರಿಂದ ವ್ಯಾಪಾರಸ್ಥರು ದಿಕ್ಕು ತೋಚದಂತಾಗಿದ್ದಾರೆ. ಈ ಕೋವಿಡ್ ಸಂಕಷ್ಟ ಕಾಲದಲ್ಲಿ ಕೈಯಲ್ಲಿ ಬಿಡಿಗಾಸು ಇಲ್ಲದೇ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.
ದೇವಸ್ಥಾನ ಬಂದ್-ವ್ಯಾಪಾರಸ್ಥರ ಪರದಾಟ:
ಪೂರ್ವಜರ ಕಾಲದಿಂದ ನಾವು ಯಲ್ಲಮ್ಮನಗುಡ್ಡದಲ್ಲೇ ವ್ಯಾಪಾರ ಮಾಡುತ್ತಾ, ಬರುವ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಆದರೀಗ ಭಕ್ತರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದರಿಂದ ನಮಗೆ ಕೆಲಸವಿಲ್ಲದೇ ಪರದಾಡುವಂತಾಗಿದೆ. ಹಾಗಾಗಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಅನುಮತಿ ನೀಡಬೇಕು. ಈಗಿರುವ ನಿರ್ಬಂಧ ಸಡಿಲಿಸಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ:
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಫೋನ್ ಮೂಲಕ ಮಾತನಾಡಿ, ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿಯೇ ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ದರ್ಶನಕ್ಕೆ ಇಂತಿಷ್ಟು ಸಮಯ ನಿಗದಿಪಡಿಸಬೇಕು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನೂ ಸಹ ನಿಯೋಜಿಸಬೇಕು. ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪಾಲನೆ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು. ಹೀಗೆ ಭಕ್ತರ ಆರೋಗ್ಯ ದೃಷ್ಟಿಯಿಂದ ಅಗತ್ಯ ಕ್ರಮ ವಹಿಸಿ ಹೇಗೆ ದೇವಸ್ಥಾನ ಆರಂಭಿಸಬಹುದು ಎಂಬುದರ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಪರೋಪಕಾರಕ್ಕೆ ವಿವಿಧ ವೇಷ.. ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ರವಿ ಕಟಪಾಡಿ
ಡಿಸಿ ಮಾಹಿತಿ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಶೀಘ್ರ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.