ಬೆಳಗಾವಿ: ನಗರದಲ್ಲಿ ನಡೆದ ಸಾವಯವ-ಸಿರಿಧಾನ್ಯ ನಡಿಗೆಗೆ ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಜ. 25ರಿಂದ ಎರಡು ದಿನಗಳ ಕಾಲ ನಡೆಯಲಿರುವ ಸಾವಯವ-ಸಿರಿಧಾನ್ಯ ಮೇಳದ ಅಂಗವಾಗಿ ಶುಕ್ರವಾರ ಸಾವಯವ-ಸಿರಿಧಾನ್ಯ ನಡಿಗೆ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ. ಅವರ ಮನವೊಲಿಸಿ ಸಾವಯವ ಕೃಷಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಈ ಮೇಳವನ್ನು ಆಯೋಜಿಸಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ರಸಗೊಬ್ಬರಗಳ ಅತಿಯಾದ ಬಳಕೆಯಾಗುತ್ತಿದೆ. ಆರೋಗ್ಯಕರ ಆಹಾರದ ಕಡೆ ಗಮನಹರಿಸಬೇಕಿದೆ. ರಾಸಾಯನಿಕ ಬಳಕೆಯಿಂದ ನಮ್ಮ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ಹಿರಿಯರು ನೀಡಿದ ಭೂಮಿ ರಕ್ಷಿಸಬೇಕಿದೆ ಎಂದರು. ಅಲ್ಲದೆ ಸಾವಯವ-ಸಿರಿಧಾನ್ಯ ಮೇಳದ ಜತೆಗೆ ಫಲಪುಷ್ಪ ಪ್ರದರ್ಶನ-2020 ಕೂಡ ನಡೆಯಲಿದ್ದು, ಸಾರ್ವಜನಿಕರು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.