ಬೆಳಗಾವಿ : ಇಲ್ಲಿನ ವಕೀಲ ನಿರಂತರ ಪ್ರತಿಭಟನೆಗೆ ಮಣಿದಿರುವ ರಾಜ್ಯ ಬಿಜೆಪಿ ಸರ್ಕಾರ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠವನ್ನು, ಬೆಳಗಾವಿಗೂ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಕಿತ್ತೂರು ಕರ್ನಾಟಕ ಭಾಗದ ಜನರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ.
ಈ ಪೀಠಕ್ಕಾಗಿ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ನೇತೃತ್ವಲ್ಲಿ 2019 ರಿಂದ ಹೋರಾಟ ನಡೆದಿತ್ತು. ಆದರೆ, ಸರ್ಕಾರ ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ (ಕಲಬುರಗಿ) ಪೀಠ ಮಂಜೂರು ಮಾಡಿತ್ತು. ಇದರಿಂದ ರೋಸಿಹೋದ ವಕೀಲರು 4 ದಿನಗಳಿಂದ ಧರಣಿ ಆರಂಭಿಸಿದ್ದರು. ಕೋರ್ಟ್ ಕಲಾಪಗಳಿಂದ ಹೊರಗುಳಿದ ವಕೀಲರ ಒತ್ತಡಕ್ಕೆ ಮಣಿದ ಸರ್ಕಾರ ಸ್ಪಂದಿಸಿದೆ.
ರಾಜ್ಯ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಕಿತ್ತೂರು ಕರ್ನಾಟಕ ಭಾಗದ 6,000ಕ್ಕೂ ಹೆಚ್ಚು ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರತಿ ಬಾರಿಯೂ ನ್ಯಾಯಕ್ಕಾಗಿ ಗ್ರಾಹಕರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಜಿಲ್ಲಾ ಗ್ರಾಹಕರ ವೇದಿಕೆಯಲ್ಲೂ 5,700 ಪ್ರಕರಣ ಬಾಕಿ ಇವೆ. ಇವುಗಳ ತುರ್ತು ವಿಲೇವಾರಿಗಾಗಿ ಪ್ರತ್ಯೇಕ ಸಂಚಾರಿ ಪೀಠ ಅಗತ್ಯ ಇದೆ ಎಂದು ವಕೀಲರು ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸಿದ್ದರು.
ನಗರದ ಇಬ್ಬರೂ ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ ಪ್ರತಿಭಟನೆಗೆ ಸಾಥ್ ನೀಡಿದ್ದರು. ಪೀಠ ತಕ್ಷಣವೇ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರು. ಇದೀಗ ಸರ್ಕಾರ ಪೀಠ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಪೀಠ ಮಂಜೂರು ಮಾಡಿದ ಸರ್ಕಾರಕ್ಕೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅಭಯ್, ಅನಿಲ್ ಬೆನಕೆ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಪ್ರತಿ ಜಿಲ್ಲೆಗಳಲ್ಲಿ ವರ್ಷಾಂತ್ಯಕ್ಕೆ 100 ಗೋಶಾಲೆಗಳ ನಿರ್ಮಾಣ: ಹೈಕೋರ್ಟ್ಗೆ ವೇಳಾಪಟ್ಟಿ ಸಲ್ಲಿಸಿದ ರಾಜ್ಯ ಸರ್ಕಾರ