ಬೆಳಗಾವಿ : ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ಚರ್ಚೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿ ಇಂದೂ ಕೂಡ ಮುಂದುವರೆದಿದೆ.
ಪಟ್ಟು ಸಡಿಲಿಸದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದ್ದಾರೆ. ಉಭಯ ಪಕ್ಷಗಳ ನಾಯಕರ ಜೊತೆ ಚರ್ಚಿಸಿ ನಿರ್ಧರಿಸುವ ಸಲಹೆ ಪರಿಗಣಿಸಿ 10 ನಿಮಿಷ ಕಲಾಪವನ್ನ ಮುಂದೂಡಿಕೆ ಮಾಡಲಾಯಿತು.
ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಎರಡು ವಿಷಯ ಇರಿಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ಧರಣಿ ನಡೆಸಿತು. ಉತ್ತರಕರ್ನಾಟಕದ ಚರ್ಚೆಗೆ ಅವಕಾಶ ಮತ್ತು ಸಚಿವರ ಹಗರಣದ ಕುರಿತು ಚರ್ಚೆಗೆ ಬೇಡಿಕೆ ಇರಿಸಿ ಧರಣಿ ನಡೆಸಿತು. ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ನಾಳೆ ಸಮಯ ನಿಗದಿಡಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರೂ ಕಾಂಗ್ರೆಸ್ ಸದಸ್ಯರು ಧರಣಿ ನಿಲ್ಲಿಸಲಿಲ್ಲ.
ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ಚರ್ಚೆಗೂ ಸಮಯ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯರಾದ ನಾರಾಯಣಸ್ವಾಮಿ, ಬಿ ಕೆ ಹರಿಪ್ರಸಾದ್, ಪ್ರತಾಪ್ ಚಂದ್ರ ಶೆಟ್ಟಿ ಚರ್ಚೆಗೆ ಅವಕಾಶ ಕೋರಿ ಪಟ್ಟು ಹಿಡಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಈ ಕುರಿತು ಸಭಾಪತಿಗಳು ರೂಲಿಂಗ್ ನೀಡಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಚರ್ಚೆಗೆ ಅವಕಾಶ ನಿರಾಕರಿಸಲಾಗಿದೆ. ಇದು ಮುಗಿದ ಪ್ರಕರಣವಾಗಿದೆ ಎಂದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಈ ಹಿಂದೆ ಎಸ್. ಆರ್. ಪಾಟೀಲ್ ಸಭಾ ನಾಯಕರಾಗಿದ್ದ ವೇಳೆ ನಾವು ಅಂದಿನ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ 600 ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪದ ಕುರಿತು ಚರ್ಚೆಗೆ ಅವಕಾಶ ಕೇಳಿದ್ದೆವು. ಆದರೆ, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ, ಚರ್ಚೆಗೆ ಅವಕಾಶ ಇರುವುದಿಲ್ಲ ಎಂದಿದ್ದರು. ಆಗೊಂದು ನ್ಯಾಯ ಈಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ದಿನೇಶ್ ಗುಂಡೂರಾವ್ ಹೆಸರು ಪ್ರಸ್ತಾಪಕ್ಕೆ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಈ ಸದನದಲ್ಲಿ ಇಲ್ಲದವರ ಹೆಸರು ಪ್ರಸ್ತಾಪ ಮಾಡಬೇಡಿ ಎಂದು ದಿನೇಶ್ ಗುಂಡೂರಾವ್ ಹೆಸರಿನ ವಿಷಯದ ಪ್ರಸ್ತಾಪ ವಿವಾದಕ್ಕೆ ತೆರೆ ಎಳೆದರು.
ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಉತ್ತರ ಕರ್ನಾಟಕ ಸಮಸ್ಯೆಗೆ ಅವಕಾಶ ನೀಡಿ ಸಚಿವರ ಹಗರಣದ ವಿಷಯ ಪ್ರಸ್ತಾಪ ಮಾಡಬಾರದು ಎಂದರೆ ಹೇಗೆ? ಹಾಗಾದರೆ, ನಾವು ಯಾಕೆ ಸದನಕ್ಕೆ ಬರಬೇಕು? ಸಚಿವರ ವಿರುದ್ಧದ ಆರೋಪ ಕುರಿತು ಚರ್ಚೆಗೆ ಅವಕಾಶ ನೀಡಬೇಕು, ಸಮಯ ನಿಗದಿಪಡಿಸುವ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಒಮ್ಮೆ ರೂಲಿಂಗ್ ನೀಡಿದ್ದೇನೆ ಮತ್ತೊಂದು ರೂಪದಲ್ಲಿ ಪ್ರಸ್ತಾಪ ತನ್ನಿ ಪರಿಶೀಲಿಸಿ ನಿರ್ಧರಿಸುತ್ತೇನೆ, ಈಗ ನೀಡಿರುವ ರೂಲಿಂಗ್‌ನಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಬೇರೆ ರೂಪದಲ್ಲಿ ತಂದಿದ್ದನ್ನು ಖಚಿತವಾಗಿ ಪುರಸ್ಕರಿಸುವ ಭರವಸೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಇದನ್ನು ನಿರಾಕರಿಸಿದ ಸಭಾಪತಿಗಳು, ಮೊದಲು ತನ್ನಿ ಪರಿಶೀಲನೆ ಮಾಡಿ ನಿಯಮಾವಳಿಯಂತೆ ಕ್ರಮಕೈಗೊಳ್ಳುತ್ತೇನೆ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ಧರಣಿ ಮುಂದುವರೆಸಿದರು.
ನಂತರ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಆಡಳಿತ ಮತ್ತು ಪ್ರತಿಪಕ್ಷ ನಾಯಕರ ಜೊತೆ ಸಭೆ ನಡೆಸಿ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಇದಕ್ಕೆ ಸಮ್ಮತಿ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿ ತಮ್ಮ ಕೊಠಡಿಯಲ್ಲಿ ಎರಡೂ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲು ತೆರಳಿದರು.