ಬೆಳಗಾವಿ: ಎಂಇಎಸ್ ವಿರುದ್ಧ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದ ಭಾಷಣದ ವಿಡಿಯೋ ವೈರಲ್ ಆಗಿದ್ದು, ನಾಡಿನ ಅನ್ನ ತಿಂದು ದ್ರೋಹ ಬಗೆಯುವವರು ಕರ್ನಾಟಕದಲ್ಲಿರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಇಟಗಿ ಗ್ರಾಮದ ದೊಡ್ಡಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಂಜಲಿ ನಿಂಬಾಳ್ಕರ್, 'ನಾನು ಈ ನಾಡಿನಲ್ಲಿ ಹುಟ್ಟಿಲ್ಲದೇ ಇರಬಹುದು. ಆದರೆ ಈ ನಾಡಿನ ಉಪ್ಪು ತಿನ್ನುತ್ತಿದ್ದೀನಿ. ಈ ನಾಡಿನ ಋಣವನ್ನು ನಾನು ತೀರಿಸ್ತೀನಿ. ಯಾವ ತಾಯಿ ನಮಗೆ ಅನ್ನ ಹಾಕ್ತಾರೆ ಆ ತಾಯಿಗೆ ದ್ರೋಹ ಮಾಡೋರು ಕರ್ನಾಟಕದಲ್ಲಿ ವಾಸ ಮಾಡುವ ಅವಶ್ಯಕತೆಯಲ್ಲ. ಅವರು ಎಲ್ಲಿಗೆ ಹೋಗಬೇಕೋ ಅಲ್ಲಿ ಹೋಗಬಹುದು' ಎಂದು ಎಂಇಎಸ್ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಉದ್ಘಾಟಿಸುವಂತೆ ವಚನಾನಂದ ಸ್ವಾಮೀಜಿಗೆ ಡಿಕೆಶಿ ಆಹ್ವಾನ
ಶಾಸಕಿ ಭಾಷಣಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಬೆಳಗಾವಿಯ ಶಾಸಕಿಯೊಬ್ಬರು ಕನ್ನಡದ ಪರ ಮಾತನಾಡಿದ್ದು ಸಂತಸದ ಸುದ್ದಿ. ವೋಟ್ ಬ್ಯಾಂಕ್ ಹೋಗುತ್ತೆ ಅಂತಾ ಭಯಪಡುವ ಬೆಳಗಾವಿಯ ರಾಜಕಾರಣಿಗಳಿಗೆ ನೀವು ಮಾದರಿ ಆಗಿದ್ದೀರಿ ಮೇಡಂ' ಅಂತಾ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.