ಬೆಳಗಾವಿ : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಬಹಳ ಹಿಂದಿನ ಬೇಡಿಕೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಧಿವೇಶನ ಕುರಿತು ಸಿಎಂ ಬೊಮ್ಮಾಯಿ ಹೇಳಿಕೆ : ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಜನಪರ ವಿಚಾರಗಳ ಚರ್ಚೆಯಾಗಿ ಪರಿಹಾರ ಸಿಗಬೇಕು. ಸಮಗ್ರ ಕರ್ನಾಟಕದ ಜೊತೆಗೆ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲದಕ್ಕೂ ಸಿದ್ಧವಾಗಿದೆ ಎಂದರು.
ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕರಿಗೆ ಸಮರ್ಥವಾದ ಉತ್ತರವನ್ನು ಸರ್ಕಾರ ಕೊಡಲಿದೆ. ಸದನದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ. ಮತಾಂತರ ಕಾಯ್ದೆ ಬಗ್ಗೆ ಕಾನೂನು ವಿಭಾಗದಲ್ಲಿದೆ. ನಂತರ ಸದನದಲ್ಲಿ ಚರ್ಚೆ ಮಾಡುತ್ತೇವೆ. ಕಾನೂನುಗಳನ್ನು ಜಾರಿಗೆ ತರುವಾಗ ಪರ-ವಿರೋಧಗಳು ಇದ್ದೇ ಇರುತ್ತವೆ. ಹೀಗಾಗಿ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರವನ್ನು ಕೊಡಲಿದೆ ಎಂದು ತಿಳಿಸಿದರು.