ಬೆಳಗಾವಿ: ಮದ್ಯಪಾನ ವ್ಯಸನಿ ಗಂಡನ ಚಟವನ್ನ ಬಿಡಿಸಲು ಔಷಧಿ ಖರೀದಿಸಲು ಬಂದಿದ್ದ ಮಹಿಳೆಯ ಮೇಲೆ ವಕೀಲನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ಸಂಜು ವಡ್ರಗಾಂವಿ ಬಂಧಿತ ಆರೋಪಿ. ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಿಳೆಯೊಬ್ಬರ ಪತಿ ಮದ್ಯಪಾನ ವ್ಯಸನಿಯಾಗಿದ್ದ. ಈ ಚಟವನ್ನ ಬಿಡಿಸಲು ಮಹಿಳೆ ಔಷಧಿ ತೆಗೆದುಕೊಳ್ಳಲು ಚಿಕ್ಕೋಡಿಗೆ ಬಂದಿದ್ದಾರೆ. ಈ ವೇಳೆ ವಕೀಲ ಸಂಜು ಎಂಬಾತ ಸಾರಾಯಿ ಅಭ್ಯಸವನ್ನು ಬಿಡಿಸುವವರು ನನಗೆ ಗೊತ್ತು. ಅವರು ನಿನಗೆ ಔಷಧಿ ಕೊಡ್ತಾರೆ ಅಂತಾ ಕಬ್ಬೂರ ಗ್ರಾಮದ ತನ್ನ ಮನೆಗೆ ಮಹಿಳೆಯನ್ನು ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ವಕೀಲ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು, ಇದರಿಂದ ಭಯಗೊಂಡ ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಮಹಿಳೆಯ ಚೀರಾಟ ಕೇಳಿ ವಕೀಲನ ಮನೆಗೆ ಸ್ಥಳೀಯರು ಆಗಮಿಸಿದ್ದು, ಬಳಿಕ ಕಾಮುಕ ವಕೀಲನನ್ನು ಹಿಗ್ಗಾಮುಗ್ಗಾ ಥಳಿಸಿ ಚಿಕ್ಕೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ, ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.