ಅಥಣಿ (ಬೆಳಗಾವಿ): ಸೋಮವಾರ ಸಂಜೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಸಂಭವಿಸಿದ ಅಪಘಾತದ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರ ಚಿದಾನಂದ ಸವದಿ 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ:
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತರು ಎರಡು ವಾಹನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದವು. ಅಲ್ಲಿಂದ ವಾಪಸ್ ಬರುವಾಗ ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ಬಂದಿದ್ದು, ನನ್ನ ಕಾರು ಹಿಂದೆ ಬರುತ್ತಿತ್ತು. ನಾನಿದ್ದ ಕಾರಿಗೂ ನನ್ನ ಕಾರಿಗೂ ಸುಮಾರು 30 ಕಿ.ಮೀ. ಅಂತರವಿತ್ತು ಎಂದು ಹೇಳಿದ್ದಾರೆ.
ಈ ವೇಳೆ ನನ್ನ ಡ್ರೈವರ್ ಕರೆ ಮಾಡಿ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಬೈಕ್ ಸವಾರ ದಿಢೀರ್ ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿರುವುದಾಗಿ ತಿಳಿಸಿದ. ಕೂಡನೇ ನಾನು ಆ್ಯಂಬುಲೆನ್ಸ್ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ಕಳುಹಿಸಿದೆ. ಬಳಿಕ ನಾನು ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ತೆರಳಿದೆ. ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದೆ. ಅಲ್ಲಿ ಆ ವ್ಯಕ್ತಿಯ ಕುಟುಂಬದವರಾಗಲಿ, ಸಂಬಂಧಿಕರಾಗಲಿ ಯಾರೂ ಇರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಚಾಲಕನ ಅಚಾತುರ್ಯದಿಂದ ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದರು.
ನಾನು ಯಾರಿಗೂ ಧಮ್ಕಿ ಹಾಕಿಲ್ಲ:
ಅಪಘಾತ ಸಂಭವಿಸಿದಾಗ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಆಸ್ಪತ್ರೆ ಸೇರಿಸುವ ಬದಲು, ಚಿದಾನಂದ ಸವದಿ ತಮ್ಮ ಕಾರಿನ ನಂಬರ್ ಪ್ಲೇಟ್ ಜಖಂಗೊಳಿಸಿ ದಾಖಲೆ ಸಮೇತ ಇನ್ನೊಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಸ್ಥಳೀಯರು ಅವರನ್ನು ಹೋಗಲು ಬಿಡದೆ ಹಿಡಿದಿಟ್ಟಿದ್ದರು. ಬಳಿಕ ಸ್ಥಳಕ್ಕೆ ಹುನಗುಂದ ಪೊಲೀಸರು ಆಗಮಿಸಿ ಚಿದಾನಂದ ಸವದಿಯನ್ನು ಬಿಡಿಸಿ ಕಳಿಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನಾನು ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಸುಖಾಸುಮ್ಮನೆ ಆರೋಪ ಮಾಡಿರುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಆ ಕಾರಿನಲ್ಲಿ ನಾನು ಇರ್ಲಿಲ್ಲ. ನಮ್ಮ ಚಾಲಕ ಇದ್ದಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಜತೆಗೆ ಅವರಿಗೆ ನೆರವು ನೀಡುವುದಾಗಿ ಚಿದಾನಂದ ಸವದಿ ಭರವಸೆ ನೀಡಿದರು.
ಇದನ್ನೂ ಓದಿ: ಹುನಗುಂದ ಬಳಿ ಡಿಸಿಎಂ ಲಕ್ಷಣ್ ಸವದಿ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು