ಚಿಕ್ಕೋಡಿ : ದೇಶದ ಜನರ ರಕ್ಷಣೆ ಮತ್ತು ಕೋವಿಡ್ ತಡೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ಕೊಡುತ್ತಿದೆ. ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ಲಸಿಕೆಗಳನ್ನು ಕೊಡದೇ ಇದ್ದರೂ ಕೋವಿಡ್ ಪ್ರಮಾಣ ಪತ್ರಗಳನ್ನು ಕೊಡುತ್ತಿರುವುದಾಗಿ ಗಂಭೀರ ಆರೋಪ ಕೇಳಿ ಬಂದಿದೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡದಿದ್ದರೂ ಚಿಕ್ಕೋಡಿ ವೈದ್ಯಾಧಿಕಾರಿ ಚೆನ್ನಮ್ಮ ಕೊಳಚಿ ಎಂಬುವರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳಲಾಗಿದೆ ಎಂದು ಜನರಿಗೆ ಕೇಂದ್ರ ಸರ್ಕಾರದ ಪ್ರಮಾಣೀಕೃತ ಸರ್ಟಿಫಿಕೇಟ್ಗಳನ್ನು ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ದೇಶದಲ್ಲಿ ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂಬ ಆದೇಶವನ್ನು ಕೊಟ್ಟಿದ್ದಲ್ಲದೇ ಜಿಲ್ಲಾಸ್ಪತ್ರೆಗಳಿಗೆ ದಿನವೊಂದಕ್ಕೆ ಇಂತಿಷ್ಟು ಟಾರ್ಗೆಟ್ ನೀಡಲಾಗುತ್ತಿದೆ. ಆದ್ರೆ, ಸಿಬ್ಬಂದಿ ಟಾರ್ಗೆಟ್ ರೀಚ್ ಮಾಡಲು ಅನ್ಯ ಮಾರ್ಗವನ್ನು ಹಿಡಿದಿದ್ದಾರೆ ಎನ್ನು ಆರೋಪ ಕೇಳಿ ಬಂದಿದೆ.
ಅದಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಕುಮ್ಮಕ್ಕಿನಿಂದಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ತೆಗೆದುಕೊಳ್ಳುವವರ ಆಧಾರ್ ಕಾರ್ಡ್ಗಳನ್ನು ಹಾಗೂ ಅವರ ಮೊಬೈಲ್ ನಂಬರ್ಗಳನ್ನು ಸಂಗ್ರಹಿಸಿಕೊಂಡು ಬರುತ್ತಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಕೆಲವರಿಗೆ ಲಸಿಕೆ ಹಾಕಿಸಿಕೊಳ್ಳಲು ಬನ್ನಿ ಎಂದು ಕರೆ ಮಾಡಿ ತಿಳಿಸುತ್ತಾರೆ.
ಆಸ್ಪತ್ರೆಗೆ ಬಂದ ಕೆಲವರಿಗೆ ಮಾತ್ರ ಲಸಿಕೆ ಹಾಕುತ್ತಿದ್ದಾರೆ. ನಮಗೆ ಬೇಗ ಲಸಿಕೆ ಹಾಕಿ ಅನ್ನೋರಿಗೆ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕೊಡುತ್ತಿದ್ದಾರಂತೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಲಸಿಕೆ ಪಡೆಯದ ಸುರೇಶ ಗುಡಿಮನಿಗೆ ಪ್ರಮಾಣಪತ್ರ?
ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಸುರೇಶ ಗುಡಿಮನಿ ಎಂಬುವವರು ಲಸಿಕೆ ಹಾಕಿಸಿಕೊಳ್ಳಲು ಚಿಕ್ಕೋಡಿ ಆಸ್ಪತ್ರೆಗೆ ತೆರಳಿದ್ದಾರೆ. ಆದ್ರೆ, ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳೆಚೆ ಮತ್ತು ಸಿಬ್ಬಂದಿ ನೀವು ಲಸಿಕೆ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ.
ಕಳೆದ ನವೆಂಬರ್ 09ರಂದು ಮೊದಲ ಡೋಸ್ ಪಡೆದಿರುವುದಾಗಿ ಹೇಳಿದ್ದಾರೆ. ನಾನು ವ್ಯಾಕ್ಸಿನೇಷನ್ ಮಾಡಿಸಿಕೊಂಡಿಲ್ಲದಿದ್ದರೂ ಹೇಗೆ ಲಸಿಕೆ ಪ್ರಮಾಣ ಪತ್ರವನ್ನು ಕೊಡುತ್ತೀರಿ ಎಂಬ ಪ್ರಶ್ನೆಗೆ ಈಗ ಮತ್ತೆ ಲಸಿಕೆ ಹಾಕಿಸಿಕೋ ಬಾ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರಂತೆ.
ಈ ಬಗ್ಗೆ ಪ್ರಶ್ನಿಸಲು ಆಸ್ಪತ್ರೆಗೆ ತೆರಳಿದ್ರೆ ಸುರೇಶನಿಗೆ ಆಸ್ಪತ್ರೆ ಸಿಬ್ಬಂದಿ ಕಡೆಯ ಗೊಂಡಾಗಳು ಕೊಲೆ ಬೆದರಿಕೆ ಹಾಕುತ್ತಿದ್ದಲ್ಲದೇ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಮಂಗಳೂರು: ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಲಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.