ಬೆಳಗಾವಿ: ಭಾರತೀಯ ಸೇನೆ ದೇಶದ ಗಡಿ ರಕ್ಷಣೆಗಾಗಿ ಎಲ್ಲದಕ್ಕೂ ಸಿದ್ಧವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶದ ಗಡಿ ರಕ್ಷಣೆ ಉಳಿವಿಗಾಗಿ ತಮ್ಮ ಪ್ರಾಣ ನೀಡಿ, ಹುತಾತ್ಮರಾಗಿರುವ ಎಲ್ಲ ಸೈನಿಕರಿಗೂ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಇಡೀ ಜಗತ್ತು ಇವತ್ತು ಕೊರೊನಾ ವೈರಸ್ನಿಂದ ತತ್ತರಿಸಿರುವ ಸಂದರ್ಭದಲ್ಲಿ ಚೀನಾ ಮತ್ತೊಮ್ಮೆ ತನ್ನ ನರಿ ಬುದ್ಧಿ ತೋರಿಸಿದೆ. ದಾಳಿಯಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದು, ನಮ್ಮ ಸೇನೆ ಕೂಡ ಚೀನಾದ 43 ಸೈನಿಕರನ್ನು ಹೊಡೆದುರುಳಿಸಿದೆ. ಭಾರತದ ರಕ್ಷಣೆಗಾಗಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೈನ್ಯ ಸನ್ನದ್ಧ ಎಂದರು.
ಇದಲ್ಲದೇ ಚೀನಾ ದಾಳಿ ಕುರಿತಂತೆ ಈಗಾಗಲೇ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಅತ್ಯಂತ ಸಮರ್ಥವಾಗಿ ಎದುರಿಸುತ್ತೇವೆ.
ಈ ವೇಳೆ, ಯುದ್ದ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಂತಹ ಪರಿಸ್ಥಿತಿ ಎದುರಾದರೆ ಭಾರತ ಅದಕ್ಕೂ ಸನ್ನದ್ಧವಾಗಿದೆ. ಎಲ್ಲದಕ್ಕೂ ಭಾರತ ತಯಾರಿಯಲ್ಲಿದೆ. 1962ರ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆ. 130 ಕೋಟಿ ಜನರು ದೇಶ ಕಾಯುವ ಸೈನಿಕರ ಹಿಂದೆ ಇದ್ದಾರೆ. ಸೈನಿಕರ ಕುಟುಂಬಸ್ಥರು ಯಾರೂ ಆತಂಕಕ್ಕೆ ಒಳಗಾಗಬಾರದು. ಲಡಾಖ್ಗೆ ರೈಲು ಸಂಚಾರ ಸ್ಥಗಿತ ವಿಚಾರ ಈಗ ವಿಡಿಯೋ ಕಾನ್ಫರೆನ್ಸ್ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.