ಬೆಳಗಾವಿ: ಕೊರೊನಾ ವೈರಸ್ ಜೊತೆಗೆ ನಾವು ಬದುಕಬೇಕಿದೆ. ಚೀನಾದವರು ಕೊರೊನಾವನ್ನ ದೇಶದೊಳಗೆ ಬಿಟ್ಟು, ಗಡಿಯಲ್ಲಿ ತಂಟೆ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೀನಾ ಸರ್ಕಾರ ಕೊರೊನಾ ವೈರಸ್ ಬಿಟ್ಟು, ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದೆ. ಕೊರೊನಾದಂತಹ ಹಲವು ವೈರಸ್ಗಳನ್ನ ಭಾರತ ಈಗಾಗಲೇ ಮೆಟ್ಟಿ ನಿಂತಿದೆ. ಈ ವೈರಸ್ಗೆ ಯಾರೂ ಭಯ ಪಡುವ ಅವಶ್ಯಕತೆಯಿಲ್ಲ. ಇದರೊಂದಿಗೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು, ಇದೇನು ಮಾರಣಾಂತಿಕ ರೋಗವಲ್ಲ. ಸರಿಯಾದ ಕಾಳಜಿ ವಹಿಸಿದ್ರೆ ಗುಣಮುಖರಾಗಬಹುದು ಎಂದರು.
ನಾಳೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಆಗಮಿಸುವ ಮಕ್ಕಳು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಎಲ್ಲಾ ವಿದ್ಯಾರ್ಥಿಗಳು ಒಂದೂವರೆ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು. ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನ ಪಾಲಕರು ಪಾಲಿಸಬೇಕು ಎಂದರು.
ಜಿಲ್ಲೆಯಲ್ಲಿ 33,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲ್ಲಿದ್ದಾರೆ. ಪ್ರತಿ ತಾಲೂಕಿನಲ್ಲಿ ಪತ್ಯೇಕವಾಗಿ ಎರಡು ಸೆಂಟರ್ಗಳನ್ನ ತೆರೆಯಲಾಗಿದ್ದು, ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನ ಕರೆ ತರಲು ಸರ್ಕಾರಿ ಬಸ್ಗಳನ್ನ ಬಳಸಿಕೊಳ್ಳಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಎದುರಿಸುವ ಮೂಲಕ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.