ಬೆಳಗಾವಿ : ಕೆಎಸ್‌ಆರ್‌ಟಿಸಿ ಬಸ್ಗೆ ಕಾರು ಡಿಕ್ಕಿಯಾದ ಪರಿಣಾಮ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ನಡೆದಿದೆ.
ಬೆಳಗಾವಿಯಿಂದ ಯರಗಟ್ಟಿಯತ್ತ ಹೊರಟಿದ್ದ ಸರ್ಕಾರಿ ಬಸ್ಗೆ ಬೆಳಗಾವಿಯತ್ತ ಹೋಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಮೃತಪಟ್ಟ ನಾಲ್ವರು ಬೆಳಗಾವಿಯ ಸಹ್ಯಾದ್ರಿ ನಗರ ನಿವಾಸಿಗಳಾಗಿದ್ದಾರೆ. ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀ ಪವಾರ್, ಪ್ರಸಾದ್ ಪವಾರ್, ಅಂಕಿತಾ ಪವಾರ್ ಹಾಗು ದೀಪಾ ಶಹಾಪುರಕರ್ ಮೃತ ದುರ್ದೈವಿಗಳು. ಇವರು ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬೆಳಗಾವಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸದ್ಯ ಬಸ್ ಅಡಿಯಲ್ಲಿ ಸಿಲುಕಿರುವ ಕಾರನ್ನು ಕ್ರೇನ್ ಮೂಲಕ ಪೊಲೀಸರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯ ನಡೆಸಿದರು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.