ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಕೃಷಿ ಸೇರಿ ವಿವಿಧ ಇಲಾಖೆಗಳಿಂದ ನಡೆಸಲಾಗುತ್ತಿರುವ ಸಮೀಕ್ಷೆ ಇನ್ನೂ ಪೂರ್ಣಗೊಳ್ಳದ ಕಾರಣ, ರೈತರು ನಾಶವಾದ ಬೆಳೆ ತೆಗೆದು ಭೂಮಿ ಹದಗೊಳಿಸುವುದೂ ಸಾಧ್ಯವಾಗುತ್ತಿಲ್ಲ, ಇದರಿಂದ ಗಡಿಭಾಗದ ರೈತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 24 ಗ್ರಾಮಗಳು ಜಲ ಪ್ರವಾಹಕ್ಕೆ ಸಿಲುಕಿದ್ದವು. ಅದರಂತೆ ಬೆಳೆದು ನಿಂತ ಕಬ್ಬು ನೀರಿಗೆ ಆಹುತಿಯಾಗಿದೆ. ದನಕರುಗಳು, ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಎಂಬ ಅರೆಕಾಸಿನ ಗಂಜಿ ನೀಡಿದೆ. ಆದರೆ, ಸಂತ್ರಸ್ತರು ಇನ್ನೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ನೆರೆ ಬಂದು 50 ದಿನಗಳೇ ಕಳೆದಿದ್ದರೂ ಕೃಷಿಕರಿಗೆ ಆರ್ಥಿಕ ನೆರವು ಸಿಕ್ಕಿಲ್ಲ. ಪ್ರವಾಹದಿಂದಾಗಿ, ನದಿ ದಂಡೆಯ ಬಹಳಷ್ಟು ಗದ್ದೆ-ಜಮೀನುಗಳಲ್ಲಿ ಭಾರಿ ಪ್ರಮಾಣದ ಮಣ್ಣು ಮತ್ತು ಮರಳು ಬಂದು ಬಿದ್ದಿದೆ. ಪ್ಲಾಸ್ಟಿಕ್ ತ್ಯಾಜ್ಯವೂ ಸಂಗ್ರಹವಾಗಿದೆ. ಇದರಿಂದಾಗಿ ಆ ಕೃಷಿ ಜಮೀನಿನ ಫಲವತ್ತತೆ ಹಾಳಾಗಿದೆ. ಆ ಮಣ್ಣನ್ನು ಬೇಸಾಯಕ್ಕೆ ಯೋಗ್ಯವಾಗಿಸುವ ಸವಾಲನ್ನು ಅನ್ನದಾತರು ಎದುರಿಸಬೇಕಾಗಿದೆ.
ಅಥಣಿ ತಾಲೂಕಿನ 17,170 ಮನೆಗಳು ನಾಶ:
ಅಥಣಿ ತಾಲೂಕಿನಲ್ಲಿ ಒಟ್ಟು 25, 646 ಕುಟುಂಬಗಳಿದ್ದು, ಮಹಾ ಮಳೆಯಿಂದ ಅಂದಾಜು 17,170 ಮನೆಗಳು ನಾಶವಾಗಿವೆ ಎಂದು ಸರ್ಕಾರ ಸಮೀಕ್ಷೆಯಲ್ಲಿ ಉಲ್ಲೇಖಿಸಿದೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಮಾತ್ರ ಬಿಡುಗಡೆಯಾಗಿಲ್ಲ. ನೆರೆ ಸಂದರ್ಭದಲ್ಲಿ 21 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿತ್ತು, ಸದ್ಯ ಈಗ ಎಲ್ಲವೂ ಬಂದ್ ಆಗಿವೆ. ಕೇವಲ 10 ಸಾವಿರ ರೂ. ನಂತೆ 26 ಸಾವಿರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ, 25 ಕೋಟಿ ರೂ. ಅನುದಾನ ಬಳಕೆಯಾಗಿದೆ. ಅದರಂತೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಹುಲಗಬಾಳ, ಮಹೇಶವಾಡಿಗೆ, ಜನವಾಡ ಗ್ರಾಮದ ಮೂವರು ವಾರಸುದಾರರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ತೀರ್ಥ ಗ್ರಾಮದ ವ್ಯಕ್ತಿ ಮರಣ ಹೊಂದಿದ್ದರೂ, ಆ ಕುಟುಂಬಕ್ಕೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. 79 ಸಾವಿರ ಜಾನುವಾರುಗಳು ನದಿ ಪ್ರವಾಹದಿಂದ ಮರಣ ಹೊಂದಿವೆ. ಇದರಲ್ಲಿ 42 ಸಾವಿರ ಜಾನುವಾರುಗಳಿಗೆ ತಲಾ 30 ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಕಾರವಾಗಬೇಕಿದೆ ಹಲವು ಯೋಜನೆಗಳು:
ಸಿಎಂ ಯಡಿಯೂರಪ್ಪ ಈಗ ಬೆಳಗಾವಿ ಪ್ರವಾಸದಲ್ಲಿದ್ದು, ಸಿಎಂ ಭೇಟಿ ನೀಡಲಿರುವ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನೆರೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಳ್ಳಲಿದ್ದಾರೆ. ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ಮಾಡಲಿವೆ. ಕಬ್ಬು ಬೆಳೆಗಾರರು ಬೆಂಬಲ ಬೆಲೆ ನಿಗಧಿ ಮಾಡುವಂತೆ ಹೋರಾಟ ಮಾಡಲಿದ್ದಾರೆ. ಹುಲಗಬಾಳ ಗ್ರಾಮದ ಜನರು ಸಿಎಂಗೆ ಮನವಿ ಸಲ್ಲಿಸಲಿದ್ದಾರೆ. ಅದೇ ರೀತಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು, ಅವುಗಳ ಬಗ್ಗೆ ಭರವಸೆ ನೀಡುವರೇ ಅಥವಾ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸುವರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಕೋಟ್ಯಾಂತರ ರೂ. ಖರ್ಚು ಮಾಡಿ ಕಟ್ಟಿರುವ ಕೊಕಟನೂರಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭವಾಗಬೇಕಿದೆ. ರಿಂಗ್ ರೋಡ್, ಬೈಪಾಸ್ ರಸ್ತೆ, ಕುಡಿವ ನೀರಿನ ಯೋಜನೆ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳು ಸಾಕಾರವಾಗ ಬೇಕಿದೆ. ಇವೆಲ್ಲಕ್ಕೂ ಸಿಎಂ ಯಡಿಯೂರಪ್ಪ ಉತ್ತರ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.