ಬೆಳಗಾವಿ : ಕೇಂದ್ರ ಬಜೆಟ್‍ಗೆ ದಿನಗಣನೆ ಶುರುವಾಗಿದೆ. ಆಯವ್ಯಯದಲ್ಲಿ ರೈಲ್ವೆ ಯೋಜನೆಗಳ ಕುರಿತು ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನನೆಗುದಿಗೆ ಬಿದ್ದಿದ್ದ ಎಲ್ಲ ಯೋಜನೆಗಳಿಗೆ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಕಾಯಕಲ್ಪ ಕಲ್ಪಿಸಿದ್ದರು. ಆದರೆ, ಅವರ ಅಕಾಲಿಕ ನಿಧನದ ಕಾರಣ, ಬಾಕಿಯಿರುವ ಕೆಲಸಗಳಿಗೆ ಆದ್ಯತೆ ಸಿಗುತ್ತೋ? ಇಲ್ಲವೊ? ಎಂಬ ಅನುಮಾನಗಳು ಜನರನ್ನು ಕಾಡುತ್ತಿವೆ.
ಸುರೇಶ ಅಂಗಡಿ ಅವರು ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಬಳಿಕ ಬಹುಬೇಡಿಕೆಯ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಚಾಲನೆ ನೀಡಿದ್ದರು. ದಶಕಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರಕಿಸಿದ್ದರು.
ಹೀಗೆ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳ ಮಂಜೂರಿಗೆ ಮುಂದಾಗಿದ್ದ ಸುರೇಶ್ ಅಂಗಡಿ, ಕೊರೊನಾಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಮೃತಪಟ್ಟರು. ಕೆಲವೇ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದ ಸುರೇಶ ಅಂಗಡಿ ಅವರನ್ನು ಇದೀಗ ಜಿಲ್ಲೆಯ ಮಾತ್ರವಲ್ಲ, ರಾಜ್ಯದ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ...ಆರ್ಥಿಕ ಸಮೀಕ್ಷೆ: ವಿತ್ತೀಯ ಬೆಳವಣಿಗೆ -7.7% ನಿರೀಕ್ಷೆ; 2022ರಲ್ಲಿ 11.5% ಅಂದಾಜು
ಪ್ರಮುಖ ಬೇಡಿಕೆಗಳೇನು? : ದಶಕಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದಿಂದ ಒಪ್ಪಿಗೆ ದೊರಕಿಸುವಲ್ಲಿ ಸುರೇಶ ಅಂಗಡಿ ಯಶಸ್ವಿಯಾಗಿದ್ದರು. ಈ ಯೋಜನೆಗೆ ಕೇಂದ್ರ ಸರ್ಕಾರ ₹900 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ರಾಜ್ಯ ಸರ್ಕಾರ ಭೂಮಿ ಕೊಡುವುದಾಗಿ ಘೋಷಿಸಿತ್ತು. ಯೋಜನೆ ಆರಂಭಕ್ಕೂ ಮುನ್ನವೇ ಸುರೇಶ ಅಂಗಡಿ ನಿಧನರಾಗಿದ್ದು ಮಾತ್ರ ವಿಪರ್ಯಾಸ.
ಉತ್ತರಕರ್ನಾಟಕ ಭಾಗದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣದ ಸರ್ವೇಯಾಗಿದೆ. ಈ ಯೋಜನೆ ಜಾರಿಗೆಗೆ ಕೇಂದ್ರದ ಒಪ್ಪಿಗೆ ಜೊತೆಗೆ ಅನುದಾನ ಬಿಡುಗಡೆಯಾಗಬೇಕಿದೆ. ಈಗ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಈ ಭಾಗದ ಜನರು ನಿರೀಕ್ಷೆ ಹೊಂದಿದ್ದಾರೆ.
ಸವದತ್ತಿಯ ರೇಣುಕಾದೇವಿ ದೇವಸ್ಥಾನಕ್ಕೆ ಕರ್ನಾಟಕಕ್ಕಿಂತ ಮಹಾರಾಷ್ಟ್ರದ ಭಕ್ತರೇ ಅಧಿಕವಾಗಿದ್ದಾರೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಕೊಲ್ಲಾಪುರ-ಸವದತ್ತಿ ಮಾರ್ಗಮಧ್ಯೆ ರೈಲು ನಿರ್ಮಾಣವಾಗಬೇಕು ಎಂಬ ಬೇಡಿಕೆಯಿದೆ. ಈ ವರ್ಷವಾದ್ರೂ ಬೇಡಿಕೆ ಈಡೇರುತ್ತಾ? ಕಾದು ನೋಡಬೇಕಿದೆ.
ಇದನ್ನೂ ಓದಿ...ಬಜೆಟ್ನಲ್ಲಿ ಆರೋಗ್ಯ ವೆಚ್ಚ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವಂತೆ ಮುಖ್ಯ ಆರ್ಥಿಕ ಸಲಹೆಗಾರ ಶಿಫಾರಸು
ಇಂಟರ್ಸಿಟಿ ವಿಸ್ತರಣೆಗೆ ಬೇಡಿಕೆ : ಈಗಾಗಲೇ ಬೆಳಗಾವಿ-ಬೆಂಗಳೂರು ಸಂಪರ್ಕಿಸುವ ಸಾಕಷ್ಟು ರೈಲುಗಳಿವೆ. ಆದರೆ, ಹಗಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಬೇಕಾದ್ರೆ ರೈಲ್ವೆಗಳ ಕೊರತೆಯಿದೆ. ಈ ಕಾರಣಕ್ಕೆ ಧಾರವಾಡ-ಬೆಂಗಳೂರು ಇಂಟರ್ಸಿಟಿ ರೈಲನ್ನು ಬೆಳಗಾವಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಗಮನ ಹರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಜನರು ಮುಂಬೈಗೆ ಪ್ರಯಾಣ ಬೆಳೆಸುತ್ತಾರೆ. ವಾಣಿಜ್ಯ ವಹಿವಾಟಿನ ಜೊತೆಗೆ ಅಧಿಕ ಪ್ರಮಾಣದಲ್ಲಿ ಯುವಕರು ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಾರೆ. ಈ ಕಾರಣಕ್ಕೆ ಬೆಳಗಾವಿ-ಮುಂಬೈ ನೇರ ರೈಲನ್ನು ಮಂಜೂರು ಮಾಡಬೇಕು ಎಂಬುವುದು ಈ ಭಾಗದ ಜನರ ಬಹು ದಿನದ ಬೇಡಿಕೆ.
ಜೊತೆಗೆ ನಗರದಲ್ಲಿ ಎರಡು ರೈಲ್ವೆ ಮೇಲ್ಸೆತುವೆ ನಿರ್ಮಾಣವಾಗಬೇಕಿದ್ದು, ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಗಮನ ಹರಿಸಬೇಕಿದೆ. ನೆರೆ ಜಿಲ್ಲೆಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು ಎಂಬುವುದು ಈ ಭಾಗದ ಜನರ ಒತ್ತಾಯವಾಗಿದೆ.