ಚಿಕ್ಕೋಡಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಗೆ ಬರುವ ಟ್ರ್ಯಾಕ್ಟರ್ಗಳಿಂದ ವಿದ್ಯಾರ್ಥಿಗಳು, ವಾಹನ ಸವಾರರು ಸೇರಿದಂತೆ ಸ್ಥಳೀಯರಿಗೆ ಕಿರಿಕಿರಿ ಆಗುತ್ತಿದೆ.
ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು 12 ಕಿ.ಮೀ. ವರೆಗೆ ರಸ್ತೆಯಲ್ಲಿ ಸಾಲುಗಟ್ಟಿ ನಿಂತಲ್ಲೇ ನಿಂತಿದ್ದು ಕಳೆದ ನಾಲ್ಕೈದು ದಿನಗಳಿಂದ ಮೂಳೆ ಗ್ರಾಮಕ್ಕೆ ಬಸ್ಗಳು ಬಾರದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.
ಅವಧಿಗೂ ಮುನ್ನ ಕಬ್ಬು ನುರಿಸಲು ಪ್ರಾರಂಭ- ಟ್ರಾಫಿಕ್ ಜಾಮ್
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರತಿ ವರ್ಷ ಅವಧಿಗೂ ಮುಂಚೆಯೇ ಕಬ್ಬು ನುರಿಸಲು ಪ್ರಾರಂಭ ಮಾಡುತ್ತಿದೆ. ಮತ್ತೊಂದೆಡೆ, ಕಡಲೆ ಸೇರಿದಂತೆ ಇತರೆ ಬೆಳೆಯನ್ನು ನೆಚ್ಚಿಕೊಂಡಿರುವ ರೈತರೆಲ್ಲರೂ ಕಬ್ಬು ಕಟಾವು ಮಾಡಿಕೊಂಡು ಕಬ್ಬು ನುರಿಸಲು ಏಕಾಏಕಿ ಕಾರ್ಖಾನೆಗೆ ಬರುತ್ತಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಆಗಮಿಸಿದ ನಾಡದೇವಿಯ ಉತ್ಸವ ಮೂರ್ತಿ
ಆದ್ರೆ, ಸಕ್ಕರೆ ಕಾರ್ಖಾನೆ ಆವರಣದಲ್ಲಿ 400 ರಿಂದ 500 ಟ್ರ್ಯಾಕ್ಟರ್ಗಳು ನಿಲ್ಲುವ ಸಾಮರ್ಥ್ಯವಿದ್ದು, ಕಾರ್ಖಾನೆ ಆಡಳಿತ ಮಂಡಳಿ ಮಾತ್ರ ಬಂದ ಎಲ್ಲ ರೈತರಿಗೂ ಕಬ್ಬು ಕಟಾವು ಮಾಡಲು ಅನುಮತಿ ನೀಡುತ್ತಿದೆ. ಹೀಗಾಗಿ, 800ಕ್ಕೂ ಹೆಚ್ಚಿನ ಟ್ರ್ಯಾಕ್ಟರ್ಗಳು ಸಕ್ಕರೆ ಕಾರ್ಖಾನೆಗೆ ಏಕಾಏಕಿ ಬರುತ್ತಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಬಸ್ ಸಂಚಾರಕ್ಕೆ ಸಮಸ್ಯೆ:
ಕಳೆದ ನಾಲ್ಕೈದು ದಿನಗಳಿಂದ ರಸ್ತೆಯಲ್ಲಿ ಕಬ್ಬು ನುರಿಸಲು ಬಂದಿರುವ ಟ್ರ್ಯಾಕ್ಟರ್ಗಳು ಸುಮಾರು 12 ಕಿಲೋ ಮೀಟರ್ವರೆಗೆ ನಿಂತಲ್ಲೇ ನಿಂತಿರುವುದರಿಂದ ಕಾಗವಾಡ ತಾಲೂಕಿನ ಮೂಳೆ ಸೇರಿ ಇತರೆ ಗ್ರಾಮಗಳಿಗೆ ಬಸ್ಗಳು ಹೋಗುತ್ತಿಲ್ಲ. ಇದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸರಿಯಾದ ವೇಳೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಹಾಗಾಗಿ ವಿದ್ಯಾರ್ಥಿಗಳ ಪೋಷಕರು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲ ಸಮಯದಿಂದ ಈ ರೀತಿಯ ಸಮಸ್ಯೆ ಉದ್ಭವಿಸುದ್ದು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.