ಬೈಲಹೊಂಗಲ: ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಇರುವುದರಿಂದ ಹೊಲದಲ್ಲಿಯೇ ಕೊಳೆಯುವಂತಾಗಿದೆ. ಇದ್ರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.
ಗರಜೂರ ಗ್ರಾಮದಲ್ಲಿ ಹಾಗಲಕಾಯಿ ಬೆಳೆ ಬೆಳೆದ ರೈತ ಸಿದ್ರಾಮಪ್ಪ ಹೊಸಮನಿ, ಎರಡರಿಂದ ಮೂರು ಲಕ್ಷಕ್ಕೂ ಹೆಚ್ಚಿನ ಹಣ ವ್ಯಯಿಸಿ ಎರಡು ಎಕರೆ ಪ್ರದೇಶದಲ್ಲಿ ಹಾಗಲಕಾಯಿ ಹಾಗೂ ಮಿಶ್ರ ಬೆಳೆಯಾಗಿ ಟೊಮೇಟೋ ಬೆಳೆದಿದ್ದರು. ಬೆಳೆ ಕೂಡ ಚೆನ್ನಾಗಿ ಬಂದಿತ್ತು. ಆದರೀಗ ಸೂಕ್ತ ಮಾರುಕಟ್ಟೆ ಸಿಗದೆ ಹೊಲದಲ್ಲಿಯೇ ಕೊಳೆಯುತ್ತಿದೆ.
ಕೃಷಿ ತಜ್ಞರ ಸಲಹೆಗಳನ್ನು ಪಡೆದು ಹಾಗಲಕಾಯಿ ಬೆಳೆಯನ್ನು ಅಚ್ಚುಕಟ್ಟಾಗಿ ಬೆಳೆದಿದ್ದರು. ಇನ್ನೇನು ಉತ್ತಮ ಲಾಭ ಬರುತ್ತೆ, ಮಾಡಿದ ಸಾಲವೆಲ್ಲಾ ತೀರುತ್ತೆ ಎಂದುಕೊಂಡಿದ್ದರು. ಆದರೆ, ಕಟಾವಿನ ಸಮಯದಲ್ಲಿ ಕೊರೊನಾ ದೊಡ್ಡ ಹೊಡೆತವನ್ನೇ ನೀಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಂತಹ ಸಮಯದಲ್ಲಿ ಕ್ಷೇತ್ರದ ಶಾಸಕರು ನಮಗೆ ಆಸರೆಯಾಗಬೇಕಿದೆ ಎನ್ನುತ್ತಾರೆ ರೈತ ಸಿದ್ರಾಮ.
ವ್ಯಾಪಾರಕ್ಕಾಗಿ ಕೇವಲ ಎರಡು ಗಂಟೆ ಅವಧಿ ನೀಡಿದ್ದು, ದಲ್ಲಾಳಿಗಳ ಕಾಟವೇ ಜಾಸ್ತಿಯಾಗಿದೆ. ನೀಡಿರುವ ಅವಧಿ ಮುಗಿಯುವವರೆಗೂ ಸುಮ್ಮನಿರುವ ದಲ್ಲಾಳಿಗಳು ಅವಧಿ ನಂತರ ಬೇಕಾಬಿಟ್ಟಿ ದರ ಕೇಳುತ್ತಾರೆ. ಅವರು ಹೇಳಿದ್ದಕ್ಕೆ ಕೊಡಬೇಕು ಇಲ್ಲ ರಸ್ತೆಗೆ ಎಸೆಯಬೇಕು. ಇದರಿಂದ ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗೆ ಕನಿಷ್ಠ ದರವೂ ಸಿಗುತ್ತಿಲ್ಲ ಎಂಬುದು ತಾಲೂಕಿನ ರೈತರ ಅಳಲು.
ಆದ್ರೆ, ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಾದ ಶಾಸಕ ಮಹಾಂತೇಶ ಕೌಜಲಗಿ ರೈತರ ಸಮಸ್ಯೆಗಳಿಗೆ ಆಸರೆಯಾಗುತ್ತಿಲ್ಲ, ಬರೀ ಲಾಕ್‌ಡೌನ್ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇನ್ನಾದರೂ ಶಾಸಕರು ಅನ್ನದಾತನ ನೆರವಿಗೆ ಧಾವಿಸುತ್ತಾರಾ ಅನ್ನೋದನ್ನ ಕಾಯ್ದುನೋಡಬೇಕಿದೆ.