ಬೆಳಗಾವಿ : ನಾವು ಹೇಳಿದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ. ಸ್ಪಲ್ಪ ತಡವಾಗಿರಬಹುದು ಎಂದು ಬಸನಗೌಡ ಯತ್ನಾಳ್ ಮತ್ತೆ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಭಾವನಾತ್ಮಕ ಭಾಷಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಧಿಕಾರ ಶಾಶ್ವತ ಅಲ್ಲ ಅಂತಾ ಅವರು ಹೇಳಿದ್ದಾರೆ. ಅದು ಸಹಜವಾಗಿ ಬಂದ ಮಾತು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ವ್ಯವಸ್ಥೆ ಬರುತ್ತದೆ : ನಾವು ಹೇಳೋದು ಯಾವುದಾದರು ಸುಳ್ಳು ಆಗಿತ್ತಾ?. ಬದಲಾವಣೆ ಅನ್ನೋದು ಸಹಜ ಯಾವಾಗ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಆ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಟ್ಟಾರೆ ಹೊಸ ವ್ಯವಸ್ಥೆ ಬರಲಿದೆ. ಮುಖ್ಯಮಂತ್ರಿ ಬಿಟ್ಟು ಹೊಸ ವ್ಯವಸ್ಥೆ ಬರುತ್ತದೆ ಎಂದು ತಿಳಿಸಿದರು.
ಹೊಸ ಯುಗ ಪ್ರಾರಂಭ : ಯತ್ನಾಳ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪಕ್ಷ ಅವಕಾಶ ಕೊಟ್ಟರೆ, ನಾನು ತೋರಿಸ್ತೇನೆ. ಒಂದು ವರ್ಷದಲ್ಲಿ ಹೊಸ ಯುಗ ಪ್ರಾರಂಭಿಸುತ್ತೇನೆ. ಕೆಲಸಕ್ಕೆ ಬಾರದವರನ್ನು ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ, ನಿರ್ಣಯ ತೆಗೆದುಕೊಳ್ಳವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟವಾಗುತ್ತದೆ ಎಂದರು.
ಮರಾಠರಿಗೆ, ಎಂಇಎಸ್ನವರಿಗೂ ಸಂಬಂಧವಿಲ್ಲ : ಎಂಇಎಸ್ ಉದ್ಧಟತನ ಬಗ್ಗೆ ಮಾತನಾಡಿದ ಅವರು, ಎಂಇಎಸ್ ಒಂದು ಗೂಂಡಾ ಸಂಸ್ಕೃತಿ ಇರುವಂತದ್ದು. ಅವರನ್ನು ಮರಾಠ ಸಮುದಾಯವೂ ಒಪ್ಪಲ್ಲ. ಎಂಇಎಸ್ ಬೇರೆ ಮರಾಠ ಸಮುದಾಯವೇ ಬೇರೆ. ಹಿಂದೆ ಐವರು ಎಂಇಎಸ್ನವರು ಇಲ್ಲಿದ್ದರು. ಈಗ ಒಬ್ಬರೂ ಇಲ್ಲಿ ಅಧಿಕಾರದಲ್ಲಿಲ್ಲ. ಮರಾಠ ಸಮುದಾಯವೇ ಅವರನ್ನು ತಿರಸ್ಕರಿಸಿದ್ದಾರೆ ಎಂದರು. ಅಲ್ಲದೆ, ಎಂಇಎಸ್ ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿ, ಅದು ಕಾನೂನಿಗೆ ಸಂಬಂಧಿಸಿದ್ದು. ಅದಕ್ಕೆ ಕಾನೂನಿನಡಿ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದರು.