ಅಥಣಿ: ಸೈನಿಕರ ಮಕ್ಕಳ ಶಾಲೆಗೆ ಸೇರುವ ಸಂಬಂಧ ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳಿದ್ದ ಅಥಣಿ ನ್ಯೂ ಎಕ್ಸಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೇನೆ ಸೇರಬೇಕಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ ಅಥಣಿ ಪಟ್ಟಣದ ನ್ಯೂ ಎಕ್ಸಿಲೆಂಟ್ ತರಬೇತಿ ಶಾಲೆಯ 60 ಮಕ್ಕಳು ಮಂಗಳೂರಿನ ಕೆನರಾ ಹೈಸ್ಕೂಲ್ನಲ್ಲಿ ಸೈನಿಕ ಮಕ್ಕಳ ಶಾಲೆಗೆ ಸೇರ್ಪಡೆಯಾಗಲು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಮರಳಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಗರದ ಕದ್ರಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದಾಗ ಮಕ್ಕಳು ಅಲ್ಲಿನ ಕೆರೆ ನೋಡಿ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭ ಸಂದೇಶ ಶಿಂದೆ (10) ಎಂಬ ಬಾಲಕ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದಾನೆ. ಬಾಲಕನನ್ನ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತ ಬಾಲಕ ತಂದೆ ಶ್ರೀಪತಿ ಅರುಣಾಚಲ ಪ್ರದೇಶದಲ್ಲಿ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಳೆ ತಮ್ಮ ಮಗ ದೇಶ ಸೇವೆ ಮಾಡುತ್ತಾನೆ. ತಮ್ಮ ಮನೆತನ ಹಾಗೂ ತಾಲೂಕಿನ ಹೆಸರನ್ನು ಎತ್ತರಕ್ಕೆ ಬೆಳೆಸುತ್ತಾನೆ ಎಂಬ ಕನಸು ನುಚ್ಚುನೂರಾಗಿದೆ ಎಂದು ಪೋಷಕರು ಮರುಗುತ್ತಿದ್ದಾರೆ. ಮೃತ ಬಾಲಕನ ಶವವನ್ನು ಅಥಣಿ ತಾಲೂಕಿನ ಬಡಚಿ ಗ್ರಾಮಕ್ಕೆ ತಂದು ಸಂಸ್ಕಾರ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.