ಬೆಳಗಾವಿ: ರಾಜಕೀಯದಲ್ಲಿ ಪ್ರಜೆಗಳನ್ನು ಪ್ರಬಲರನ್ನಾಗಿ ಮಾಡಲು ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 27 ಕ್ಷೇತ್ರಗಳಿಂದ ಸಾಮಾನ್ಯ ಪ್ರಜೆಗಳನ್ನು ಗುರುತಿಸಿ ನಮ್ಮ ಪಕ್ಷದಿಂದ ಕಣಕ್ಕಿಳಿಸಲಾಗಿದೆ ಎಂದು ಪ್ರಜಾಕೀಯ ಪಕ್ಷ ಸಂಸ್ಥಾಪಕ, ನಟ ಉಪೇಂದ್ರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯ ನಂತರ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ರಾಜಕೀಯ ವಿರುದ್ಧವಾಗಿ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಎನ್ನುವುದು ಒಂದು ವ್ಯವಹಾರವಾಗಿದೆ. ಸಂವಿಧಾನದಲ್ಲಿದ್ದ ಪ್ರಜಾಪ್ರಭುತ್ವಕ್ಕೂ ಈಗ ಜಾರಿಯಲ್ಲಿರುವ ಪ್ರಜಾಪ್ರಭುತ್ವಕ್ಕೂ ತುಂಬಾ ಭಿನ್ನತೆಗಳಿವೆ. ಪ್ರಜೆಗಳೇ ನಾಯಕರನ್ನು ಆರಿಸುವ ಬದಲಿಗೆ ನಾಯಕರೇ ಪ್ರಜಾಪ್ರಭುತ್ವವನ್ನು ಖರೀದಿಸುತ್ತಿದ್ದಾರೆ. ಇದು ಬದಲಾಗಬೇಕು ಎಂದರು.
ಜನಪ್ರತಿನಿಧಿಗಳು ಕೇವಲ ಸೇವಕರಾಗಿ ಪ್ರಜೆಗಳೇ ನಾಯಕರಾಗಬೇಕೆಂಬ ಉದ್ದೇಶದಿಂದ ಉತ್ತಮ ಪ್ರಜಾಕೀಯ ಪಕ್ಷವನ್ನು ಹುಟ್ಟುಹಾಕಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಳ್ಳಾರಿಯನ್ನು ಹೊರತುಪಡಿಸಿ 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಬೆಳಗಾವಿಯಿಂದ ವಿಶ್ವನಾಥ ರಾಜಪ್ಪನವರು ಸ್ಪರ್ಧಿಸಲಿದ್ದಾರೆ ಎಂದರು.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಪ್ರಣಾಳಿಕೆ ಇಲ್ಲ. ಏಕೆಂದರೆ ಪ್ರಣಾಳಿಕೆಗಳು ಕೇವಲ ಆಶ್ವಾಸನೆಗಳಾಗುತ್ತಿವೆ. ಅದಕ್ಕಾಗಿ ಜನರ ಸಮಸ್ಯೆಗಳನ್ನೇ ಪ್ರಣಾಳಿಕೆಯನ್ನಾಗಿಸುವ ಉದ್ದೇಶದಿಂದ ತಮಗೆ ಬೇಕಾದ ಅಭಿವೃದ್ಧಿಗಳನ್ನು ಜನತೆಯೇ ನಿರ್ಧರಿಸಬೇಕೆಂದು ಜನರ ಕೈಯಲ್ಲೇ ಅಧಿಕಾರ ನೀಡಿದ್ದೇವೆ ಎಂದರು.