ಚಿಕ್ಕೋಡಿ : ಯುವತಿಗೆ ವಿನಾಕಾರಣ ಚುಡಾಯಿಸುತ್ತಿದ್ದ ಯುವಕನಿಗೆ ತಿಳುವಳಿಕೆ ನೀಡುವ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿರೋ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿರಗಾಂವ ಗ್ರಾಮದ ಭೀಮಪ್ಪ ಮಹಾದೇವ ಮಗುದುಮ್ಮ ಎಂಬಾತ ಅದೇ ಗ್ರಾಮದ ಸಂತೋಷ ಅಪ್ಪಾಸಾಹೇಬ ತೇಲಿ (42) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಶಿರಗಾಂವ ಗ್ರಾಮದ ಓರ್ವ ಯುವತಿಗೆ ಆರೋಪಿ ಭೀಮಪ್ಪ ಮಹಾದೇವ ಮಗದುಮ್ಮ ಎಂಬ ಯುವಕ ಕಳೆದ ಹಲವಾರು ದಿನಗಳಿಂದ ಚುಡಾಯಿಸುತ್ತಿದ್ದನಂತೆ. ಈ ಸಂಬಂಧ ಯುವತಿಯ ಪೋಷಕರು ಭೀಮಪ್ಪ ಮಗುದುಮ್ಮಗೆ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ತಾಕಿತು ಮಾಡಿಸಿದ್ದಾರೆ. ಇದಲ್ಲದೇ ಸಂತೋಷ ಅಪ್ಪಾಸಾಹೇಬ ತೇಲಿ ಕೂಡ ಭೀಮಪ್ಪನಿಗೆ ತಿಳುವಳಿಕೆ ಹೇಳಿದ್ದಾನೆ.
ಈ ಕುರಿತಂತೆ ಭೀಮಪ್ಪ ಹಾಗೂ ಸಂತೋಷನ ಮಧ್ಯೆಯು ಸಣ್ಣ ಪ್ರಮಾಣದಲ್ಲಿ ಜಗಳ ನಡೆದಿತ್ತು. ಇದಾದ ನಂತರ ಮೂರು ತಿಂಗಳು ಕಾಲ ಭೀಮಪ್ಪಾ ಶಿರಗಾಂವ ಗ್ರಾಮವನ್ನು ಬಿಟ್ಟು ಹೋಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಮತ್ತೆ ಶಿರಗಾಂವ ಗ್ರಾಮಕ್ಕೆ ವಾಪಸ್ ಬಂದಿದ್ದನು. ಭೀಮಪ್ಪ ಮತ್ತೆ ಸಂತೋಷನ ಜೊತೆಗೆ ಸ್ನೇಹ ಬೆಳಸಿಕೊಂಡಿದ್ದಾನೆ.
ಏ.13ರಂದು ಇಬ್ಬರೂ ಗ್ರಾಮದ ಬೆಳಗಾವಿ ವೈನ್ ಶಾಪ್ ಹತ್ತಿರ ಹೋಗಿದ್ದಾರೆ. ಅದೇ ಸಮಯದಲ್ಲಿ ಮದ್ಯದ ಆಮಲಿನಲ್ಲಿದ್ದ ಭೀಮಪ್ಪ ಚಾಕುವಿನಿಂದ ಜೊತೆಯಲ್ಲಿದ್ದ ಸಂತೋಷ್ಗೆ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಸಂತೋಷ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಭೀಮಪ್ಪನನ್ನು ಖಡಕಲಾಟ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರದ ರಾಜೌರಿಯಲ್ಲಿ ಐಇಡಿ ಪತ್ತೆ..ನಿಷ್ಕ್ರಿಯಗೊಳಿಸಿದ ಸೇನಾಪಡೆ