ಬೆಳಗಾವಿ : ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನೀಡದಿದ್ದಕ್ಕೆ ನಾನ್ ಕೋವಿಡ್ ರೋಗಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.
ಇದರಿಂದ ಸಹನೆ ಕಳೆದುಕೊಂಡ ಮೃತನ ಮಗ ಪ್ರಧಾನಿ ಮೋದಿ ಸೇರಿ ಇತರೆ ರಾಜಕಾರಣಿಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಅಳಲು ತೋಡಿಕೊಂಡ ವಿಡಿಯೋ ವೈರಲ್ ಆಗಿದೆ.
ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಕಂಬಾರ ಕಳೆದ 15 ದಿನಗಳಿಂದ ಜ್ವರ ಸೇರಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.
ಅವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಆದ್ರೆ, ಆಸ್ಪತ್ರೆಗೆ ಕರೆತಂದಾಗ ರ‌್ಯಾಪಿಡ್ ಟೆಸ್ಟ್ ವರದಿಯಲ್ಲಿ ಕೋವಿಡ್ ನೆಗೆಟಿವ್ ಬಂದಿದೆ.
ಆದರೂ ಸೂಕ್ತ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಗದೇ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗ ನಿರಂಜನ ಎಂಬುವರು ಆರೋಪಿಸಿದ್ದಾರೆ.
ಅಲ್ಲದೆ, ತಾಲೂಕು ಆಸ್ಪತ್ರೆಯಲ್ಲೇ ವಿಡಿಯೋ ಮಾಡಿ ವೈದ್ಯರನ್ನು ತೋರಿಸುತ್ತಾ, ಇವರ್ಯಾರೂ ನಮ್ಮ ತಂದೆಯನ್ನು ಬದುಕಿಸಲು ಸಹಾಯ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬಳಿಕ ಸೆಲ್ಪಿ ವಿಡಿಯೋ ಮಾಡಿ ಮಾತನಾಡಿರುವ ನಿರಂಜನ್, ನಮ್ಮ ತಂದೆಗೆ ಕೋವಿಡ್ ನೆಗೆಟಿವ್ ಬಂದರೂ ಯಾರು ಆಮ್ಲಜನಕ ಕೊಡಲಿಲ್ಲ.
ಅವರು ನರಳಿ ನರಳಿ ಸಾವನ್ನಪ್ಪಿದ್ದಾರೆ ಎಂದು ಪ್ರಧಾನಿ ಮೋದಿ ಸೇರಿ ಇತರೆ ರಾಜಕಾರಣಿಗಳನ್ನು ಅತೀ ಕೆಟ್ಟ ಶಬ್ದಗಳಿಂದ ಬೈಯ್ಯುತ್ತಾ ಕಂಬನಿ ಸುರಿಸಿದ ವಿಡಿಯೋ ವೈರಲ್ ಆಗಿದೆ.