ಬೆಳಗಾವಿ: ಕನ್ನಡ ಶಿಕ್ಷಕಿಯೊಬ್ಬರು ತಮ್ಮ 13 ತಿಂಗಳ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕಟ್ಟಿಗೆಯಿಂದ ನಿರ್ಮಿಸಿದ್ದ, ಅಪಾಯದ ಅಂಚಿನಲ್ಲಿರುವ ತೂಗು ಸೇತುವೆಯನ್ನು ದಾಟಿ ಶಾಲೆಗೆ ಹೋಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ಕೊಂಗಾಳಿ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವನಿತಾ ಶೆಟ್ಟಿ, ಪ್ರತಿದಿನ ಶಾಲೆಗೆ ಹೋಗಬೇಕಾದ್ರೆ ತಮ್ಮ ಪ್ರಾಣವನ್ನು ಒತ್ತೆ ಇಡಬೇಕಿದೆ. ಖಾನಾಪುರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಪಾರ ಮಳೆಗೆ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರತಿನಿತ್ಯ ಶಾಲೆಗೆ ಹೋಗಬೇಕಾದ್ರೆ ಕೊಂಗಾಳಿ ಹೊರವಲಯದಲ್ಲಿ ಹಲವಾರು ವರ್ಷಗಳ ಹಿಂದೆಯೇ ಕಟ್ಟಿಗೆಯಿಂದ ನಿರ್ಮಿಸಿದ್ದ, ಸುರಕ್ಷಿತವಲ್ಲದ ತೂಗು ಸೇತುವೆಯನ್ನು ದಾಟಬೇಕು. ಈ ಹಿನ್ನೆಲೆ ಶಿಕ್ಷಕಿಯೊಬ್ಬರು ಒಂದು ಕೈಯಲ್ಲಿ ಹಗ್ಗ ಮತ್ತೊಂದು ಕೈಯಲ್ಲಿ 13 ತಿಂಗಳ ಮಗುವನ್ನು ಹಿಡಿದುಕೊಂಡು ಪ್ರಾಣವನ್ನು ಲೆಕ್ಕಿಸದೇ ಪ್ರತಿದಿನ ಈ ಸೇತುವೆ ದಾಟುತ್ತಿದ್ದಾರೆ. ಸೇತುವೆ ದಾಟುವ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದ್ರೂ ಮಗು ಮತ್ತು ತಾಯಿ ಯಮನಪಾದ ಸೇರುವುದು ಗ್ಯಾರಂಟಿ.
ಆನ್ಲೈನ್ ಪಾಠಕ್ಕೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಶಾಲೆಗೆ ತನ್ನ ಮಗುವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿರುವ ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾದರೂ ಸಹ ಅವರ ದುಸ್ಸಾಹಸಕ್ಕೆ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಅಪಾಯದ ಅಂಚಿನಲ್ಲಿರುವ, ಗುಡ್ಡಗಾಡು ಪ್ರದೇಶದಲ್ಲಿರುವ ಶಾಲೆಗಳಿಗೆ ಹೋಗುವ ಶಿಕ್ಷಕರಿಗೆ ಮಳೆಗಾಲದಲ್ಲಿ ವಿನಾಯಿತಿ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಅಪಾಯದಲ್ಲಿ ತೂಗು ಸೇತುವೆ:
ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಒಂದೆಡೆಯಾದ್ರೆ, ಕೆಳಗೆ ರಭಸದಿಂದ ಹರಿಯುವ ಹಳ್ಳ ಮತ್ತೊಂದೆಡೆ. ಹಳ್ಳ ದಾಟಲು ಈ ತೂಗು ಸೇತುವೆಯನ್ನು ಹಲವಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಇದೀಗ ಸೇತುವೆ ಶಿಥಿಲ ಹಂತಕ್ಕೆ ತಲುಪಿದೆ. ಹೀಗಾಗಿ ಜನರು ಸ್ವಲ್ಪ ಎಚ್ಚರ ತಪ್ಪಿದ್ರೂ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುವುದು ಗ್ಯಾರಂಟಿ.
ಅಷ್ಟೇ ಅಲ್ಲದೆ ಕೊಂಗಾಳಿ ಶಾಲೆಗೆ ಶಿಕ್ಷಕಿ ವನಿತಾ ಶೆಟ್ಟಿ ಮಾತ್ರವಲ್ಲದೆ ಅವರೊಡನೆ ಇತರೆ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಕೂಡ ಇದೇ ಸೇತುವೆಯನ್ನು ದಾಟಿ ಹೋಗಬೇಕಂತೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ.