ಬೆಳಗಾವಿ : ಮೇಳದಲ್ಲಿ ಮಾರಾಟಕ್ಕಿಟ್ಟ ವಾಹನಗಳ ಫೋಟೋ ತೆಗೆದು ಅದನ್ನು ಒಎಲ್ಎಕ್ಸ್ನಲ್ಲಿ ಹಾಕಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ನಂಬಿಸಿ ಮೋಸ ಮಾಡುತ್ತಿದ್ದ ಗ್ಯಾಂಗ್‌ನ ಬೆಳಗಾವಿ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಧಾರವಾಡ ಮೂಲದ ಆರೋಪಿ ಶಿವಾನಂದ ಧೂಪದಾಳ, ಬೆಳಗಾವಿಯ ಅಬ್ದುಲ್ ಮತ್ತು ಜುಬೇರ್ ಬಂಧಿತ ಆರೋಪಿಗಳು. ಮೂವರು ಆರೋಪಿಗಳನ್ನು ವಂಚನೆ ಕೇಸ್ ಅಡಿ ಹಿಂಡಲಗಾ ಜೈಲಿಗೆ ಅಟ್ಟಲಾಗಿದೆ.
ವಂಚನೆ ಹೇಗೆ?: ವಾಹನ ಮೇಳದಲ್ಲಿ ಪ್ರದರ್ಶಿಸಲಾಗುವ ಮಿನಿ ಲಾರಿಗಳು, ಟಾಟಾ ಏಸ್ಗಳು, ಬೈಕ್ಗಳ ಬಗ್ಗೆ ಮಾಹಿತಿ ಪಡೆದು ನಂತರ ಆ ವಾಹನಗಳ ಫೋಟೋವನ್ನು ಒಎಲ್ಎಕ್ಸ್ನಲ್ಲಿ ಹಾಕಿ, ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದರು.
ಹೇಗೆಲ್ಲಾ ಮೋಸ ಮಾಡ್ತಿದ್ದರು?: ಬೆಂಗಳೂರು ಮೂಲದ ರವಿಕುಮಾರ್ ಎಂಬುವರು ಒಎಲ್ಎಕ್ಸ್ನಲ್ಲಿ ಅಶೋಕ ಲೇಲ್ಯಾಂಡ್ ವಾಹನವನ್ನು ಕಂಡು, ಅದನ್ನು ಖರೀದಿಸಲು ಅಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ.
ಈ ವೇಳೆ ವಂಚಕ ಗ್ಯಾಂಗ್ನಲ್ಲಿ ಒಬ್ಬರು ನೀವು ಬೆಳಗಾವಿಗೆ ಬನ್ನಿ ಎಂದು ರವಿಕುಮಾರ್ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ಯಾವುದೋ ಮೇಳದಲ್ಲಿ ವಾಹನವನ್ನು ತೋರಿಸಿದ್ದಾರೆ.
ಇದಾದ ಬಳಿಕ ಬಾಂಡ್ ಮಾಡಿಸುವ ರೀತಿ ನಾಟಕವಾಡಿದ್ದಾರೆ. ಇದಕ್ಕಾಗಿ 3 ಲಕ್ಷ 20 ಸಾವಿರ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಖರೀದಿಗೆ ಬಂದಿದ್ದ ರವಿಕುಮಾರ್ರನ್ನು ಅಲ್ಲಿಯೇ ಬಿಟ್ಟು ವಂಚಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದಲ್ಲದೇ, ಲಾರಿ ಕೊಡಿಸುತ್ತೇವೆ ಎಂದು ಮತ್ತೊಬ್ಬರ ಬಳಿ 2 ಲಕ್ಷ 30 ಸಾವಿರ ಹಣ ಪೀಕಿದರೆ, ಟ್ರ್ಯಾಕ್ಟರ್ ಮಾರಾಟಕ್ಕೆ 5 ಲಕ್ಷ ವಂಚಿಸಿದ್ದಾರೆ. ಬಳಿಕ ಫೋನ್ ಸ್ವಿಚ್ಆಫ್ ಮಾಡಿಕೊಂಡು ಗ್ಯಾಂಗ್ ನಾಪತ್ತೆಯಾಗುತ್ತಿತ್ತು.
ಈ ಕುರಿತು ಮೋಸ ಹೋದವರು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂವರ ವಿರುದ್ದ ಬೆಳಗಾವಿಯಲ್ಲಿ 3 ಕೇಸ್, ಬಾಗಲಕೋಟೆಯಲ್ಲಿ 1, ಹುಬ್ಬಳ್ಳಿಯಲ್ಲಿ 2, ಧಾರವಾಡದಲ್ಲಿ 1 ಪ್ರಕರಣ ದಾಖಲಾಗಿತ್ತು. ಈ ವಂಚಕ ಗ್ಯಾಂಗ್ ಅನ್ನು ಪತ್ತೆ ಹಚ್ಚಲು ವಿಶೇಷ ತನಿಖೆ ನಡೆಸಿದ ಪೊಲೀಸರು, ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.