ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿ 7 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ದುರ್ಘಟನೆ ಬೆಳಗಾವಿ ತಾಲೂಕಿನ ಕಲ್ಯಾಳ್ ಫೂಲ್ ಬಳಿ ಇಂದು ಬೆಳಿಗ್ಗೆ ಸಂಭವಿಸಿತು.
ಕ್ರೂಸರ್ ವಾಹನದಲ್ಲಿ ಕಾರ್ಮಿಕರು ಗೋಕಾಕ್ ತಾಲೂಕಿನ ಅಕ್ಕತಂಗಿಯರಹಾಳ್ಳ ಗ್ರಾಮದಿಂದ ಬೆಳಗಾವಿಗೆ ತೆರಳುತ್ತಿದ್ದರು. ವಾಹನದಲ್ಲಿ ಒಟ್ಟು 18ಕ್ಕೂ ಅಧಿಕ ಕಾರ್ಮಿಕರಿದ್ದರು ಎನ್ನಲಾಗುತ್ತಿದೆ. ಸ್ಥಳದಲ್ಲೇ 7 ಜನ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿರುವ ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಚಾಲಕ ಭೀಮಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಕ್ಕತಂಗೇರಹಾಳ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ಗೋಕಾಕ್ ತಾಲೂಕಿನ ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ(ಎಸ್‌ಎ) ಗ್ರಾಮದ ಬಸವರಾಜ ಸನದಿ (35) ಮೃತಪಟ್ಟವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೆಳಗಾವಿ ಪೋಲಿಸ್ ಕಮೀಶನರ್ ಡಾ. ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಲ್ಲಿ 7 ಜನ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಗಾಯಾಳುಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೆಲ ತಿಂಗಳ ಹಿಂದಷ್ಟೇ ಪತಿ ಕಳೆದುಕೊಂಡ ಶಿಕ್ಷಕಿ ಅಪಘಾತದಲ್ಲಿ ಸಾವು, ಮಕ್ಕಳು ಅನಾಥ
ಪೈಪೋಟಿ ಕಾರಣವೇ: ಸಾಂಬ್ರಾ-ಸುಳೇಭಾವಿ ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ದುರಸ್ತಿ ಕಾಮಗಾರಿಯ ಕೆಲಸಕ್ಕೆ ಅಕ್ಕತಂಗೇರಹಾಳ ಹಾಗೂ ಸುತ್ತಲಿನ ಗ್ರಾಮದಿಂದ ಕಾರ್ಮಿಕರು ಹೊರಟಿದ್ದರು. ಈ ವೇಳೆ ಅದೇ ಗ್ರಾಮದ ಕ್ರೂಸರ್ ವಾಹನ ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಾರ್ಮಿಕರು ನಿತ್ಯ ಮೂರು ವಾಹನಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು. ಮೂರೂ ವಾಹನಗಳ ಮಧ್ಯೆ ನಾ ಮುಂದು ತಾನು ಮುಂದು ಎಂಬ ಪೈಪೋಟಿ ನಡೆಯುತ್ತಿತ್ತು. ಪೈಪೋಟಿಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.