ಅಥಣಿ: ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಎಳ್ಳು ಹುರಿದಂತೆ ಪಟಾ ಪಟಾ ಮಾತನಾಡಿ ಅಥಣಿ ತಾಲೂಕಿನ ನಾಲ್ಕು ವರ್ಷದ ಬಾಲಕಿವೋರ್ವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಅಥಣಿ ಪಟ್ಟಣದ ಕೋಮಲ್ ಮತ್ತು ಸದಾಶಿವ ದಂಪತಿ ಪುತ್ರಿ ಶ್ರಾವ್ಯ ಸದಾಶಿವ ಚಿಕ್ಕಟ್ಟಿ ಎಂಬ ನಾಲ್ಕು ವರ್ಷದ ಬಾಲಕಿ ಒಂದಲ್ಲ, ಎರಡಲ್ಲ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಗಾಯನ, ಸಾಹಿತ್ಯ, ನಾಟಕ, ನೃತ್ಯ, ವೀಣೆ, ಚಿತ್ರಕಲೆ, ಯೋಗ, ಸ್ಮರ್ಧಾತ್ಮಕ ಪರೀಕ್ಷೆ, ನಿರೂಪಣೆ, ನಕ್ಷೆಯಲ್ಲಿ ದೇಶ ವಿದೇಶಗಳನ್ನು ಗುರುತಿಸುವುದು, ಕರಾಟೆ, ಇತ್ಯಾದಿ ಕ್ಷೇತ್ರಗಳಲ್ಲಿ ಈ ಪುಟ್ಟ ಬಾಲಕಿ ಗಣನೀಯ ಸಾಧನೆ ಮಾಡಿದ್ದಾಳೆ.
ವಿಶ್ವದ ಭೂಪಟದಲ್ಲಿ ದೇಶಗಳನ್ನು ಗುರುತಿಸುವುದು, ಕರಾಟೆಯಲ್ಲಿ ಪ್ರಾವೀಣ್ಯತೆ ಹಾಗೂ ಭರತನಾಟ್ಯ, ಯೋಗ ಹೀಗೆ ಮಗುವಿನ ಸಕಲ ಕಾರ್ಯವೈಖರಿ ನೋಡಿ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ನೀಡಲಾಗಿದೆ. ಬಾಲಕಿ 2020 ರಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ಶ್ರಾವ್ಯ ಅವರ ತಾಯಿ ವೃತ್ತಿಯಲ್ಲಿ ಶಿಕ್ಷಕಿ ಆಗಿದ್ದು, ಲಾಕ್ಡೌನ್ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದರಿಂದ ಮಗಳಿಗೆ ಎಲ್ಲವನ್ನೂ ಕಲಿಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.