ಬೆಳಗಾವಿ: ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗಿ ಡ್ಯಾಂನಿಂದ ನೀರು ಬಿಟ್ಟರೆ ಸಮಸ್ಯೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ 69ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ಸಹ ನೀರು ಹರಿದು ಹೋಗುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ಶೇಕಡಾ 22ರಷ್ಟು ನೀರು ಸಂಗ್ರಹವಾಗಿದೆ. ಕೋಯ್ನಾ ಅಥವಾ ಮಹಾರಾಷ್ಟ್ರದ ಯಾವುದೇ ಡ್ಯಾಂನಿಂದ ನೀರು ಬಿಡ್ತಿಲ್ಲ. ಮಳೆ ಎಷ್ಟು ಆಗಿದೆಯೋ ಆ ನೀರು ಮಾತ್ರ ಬರ್ತಿದೆ. ಹಿಡಕಲ್ ಜಲಾಶಯದಲ್ಲಿ ಶೇಕಡಾ 17.5ರಷ್ಟು ನೀರು ಸಂಗ್ರಹವಾಗಿದೆ. ನವಿಲುತೀರ್ಥ ಜಲಾಶಯದಲ್ಲಿ 34% ರಷ್ಟು ನೀರು ಸಂಗ್ರಹವಾಗಿದೆ. ಎಷ್ಟೇ ಒಳಹರಿವು ಬಂದರೂ ಡ್ಯಾಂಗಳಲ್ಲಿ ಸಂಗ್ರಹ ಸಾಮರ್ಥ್ಯ ಇದೆ. ಮಾರ್ಕಂಡೇಯ ಜಲಾಶಯದಲ್ಲೂ 36% ನೀರು ಸಂಗ್ರಹವಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ-ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿವೆ. ಖಾನಾಪುರ ತಾಲೂಕಿನಲ್ಲಿ ಒಂದು ಶಾಲೆಗೆ ಹಾನಿಯಾಗಿದೆ. ಎರಡು ಹೆಕ್ಟೇರ್ ಪ್ರದೇಶದಲ್ಲಿ ಬಾಳೆಹಣ್ಣು, ತರಕಾರಿ ಬೆಳೆ ನಾಶವಾಗಿದೆ. ಸಿಎಂ ಸಹ ಎಲ್ಲರಿಗೂ ಅಲರ್ಟ್ ಆಗಿರುವಂತೆ ಹೇಳಿದ್ದಾರೆ. ಈಗಾಗಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ನಮ್ಮಲ್ಲಿದೆ. ಹೋದ ವರ್ಷಕ್ಕೆ ಹೋಲಿಸಿದ್ರೆ 50% ರಷ್ಟು ಡ್ಯಾಂ ಸ್ಟೋರೇಜ್ ಇದೆ. ತಹಶೀಲ್ದಾರ್ ಅಕೌಂಟ್ನಲ್ಲಿ ಹಣವಿದ್ದು, ತುರ್ತು ಪರಿಹಾರಕ್ಕೆ ಸಮಸ್ಯೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ: ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿನ್ಗೆ ಡೈವರ್ಟ್