ಬೆಂಗಳೂರು: ಟೊಮೆಟೊ ಬಳಿಕ ಈಗ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸುವ ಸಾಧ್ಯತೆಯಿದೆ ಎಂದು ಕೃಷಿ ವಿಶ್ಲೇಷಕರು ಹೇಳಿದ್ದಾರೆ. ಮುಂದಿನ ತಿಂಗಳ ಹೊತ್ತಿಗೆ ಈರುಳ್ಳಿ ಬೆಲೆ ದುಪ್ಟಟ್ಟಾಗಿ ಕೆಜಿಗೆ 55 ರಿಂದ 60 ರೂಪಾಯಿ ತಲುಪಬಹುದು ಎಂದು ವಿಶ್ಲೇಷಿಸಲಾಗಿದೆ. ಭಾರತದಲ್ಲಿ ಅಪಾರ ಪ್ರಮಾಣದ ಈರುಳ್ಳಿಯ ಸಂಗ್ರಹ ಇದ್ದರೂ, ಈ ವರ್ಷ ಅತಿಯಾದ ಬೇಸಿಗೆಯ ಶಾಖದಿಂದಾಗಿ ಬಹಳಷ್ಟು ಪ್ರಮಾಣದ ಈರುಳ್ಳಿಯ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಈರುಳ್ಳಿಯ ಬೆಲೆ ಹೆಚ್ಚಳವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆಯಲ್ಲಿ ಈರುಳ್ಳಿಯ ಸಗಟು ಬೆಲೆ ಬುಧವಾರ ಪ್ರತಿ ಕೆಜಿಗೆ 5 ರಿಂದ 24 ರೂ.ಗಳ ನಡುವೆ ಇದ್ದರೆ, ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 25 ರಿಂದ 35 ರೂ. ಆಗಿತ್ತು. ಉತ್ತಮ ಗುಣಮಟ್ಟದ ಈರುಳ್ಳಿಯ ಪೂರೈಕೆ ಕ್ಷೀಣಿಸುತ್ತಿರುವುದರಿಂದ ಈರುಳ್ಳಿಯ ಕನಿಷ್ಠ ಮತ್ತು ಗರಿಷ್ಠ ಬೆಲೆಗಳ ನಡುವಿನ ಅಂತರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬೆಲೆಗಳು ಶೀಘ್ರದಲ್ಲೇ ಹೆಚ್ಚಾಗುತ್ತವೆ ಎಂಬ ನಿರೀಕ್ಷೆಯಿಂದ ರೈತರು ಈರುಳ್ಳಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ದೆಹಲಿ ಮಾರುಕಟ್ಟೆಗೆ ಬರುತ್ತಿರುವ ಸುಮಾರು 30-40 ಪ್ರತಿಶತದಷ್ಟು ಈರುಳ್ಳಿ ಕಳಪೆ ಗುಣಮಟ್ಟದ್ದಾಗಿದೆ. ಇದರಿಂದಾಗಿ ಕಳೆದ ತಿಂಗಳಲ್ಲಿ ಬೆಲೆಗಳು ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ದೆಹಲಿ ಮೂಲದ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದರು. ಕಡಿಮೆ ಬೆಲೆಯಲ್ಲಿ ಕಳಪೆ ಗುಣಮಟ್ಟದ ಈರುಳ್ಳಿಯ ಸಾಕಷ್ಟು ಪೂರೈಕೆಯು ಈರುಳ್ಳಿ ಬೆಲೆಗಳ ಒಟ್ಟಾರೆ ಹೆಚ್ಚಳವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಮಹಾರಾಷ್ಟ್ರ ಮೂಲದ ಈರುಳ್ಳಿ ರಫ್ತುದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಮುಖ್ಯ ಖಾರಿಫ್ ಕೊಯ್ಲು ದೀಪಾವಳಿಯ ಸಮಯದಲ್ಲಿ ಪ್ರಾರಂಭವಾಗುತ್ತದೆ. ಆದಾಗ್ಯೂ ಈ ವರ್ಷ ದಕ್ಷಿಣ ರಾಜ್ಯಗಳ ಬೆಳೆಯ ಬಗ್ಗೆ ಕಳವಳಗಳಿವೆ. ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಈ ವರ್ಷ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಈರುಳ್ಳಿ ಕೃಷಿಯು ಶೇಕಡಾ 60-70 ರಷ್ಟು ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದ್ದರಿಂದ ರೈತರು ಈರುಳ್ಳಿ ಬೆಳೆಯುವುದನ್ನು ಕಡಿಮೆ ಮಾಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ದೇಶದ ಈರುಳ್ಳಿ ಉತ್ಪಾದನೆಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಪಾಲು ಹೊಂದಿರುವ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಯ ನಾಟಿ ವಿಳಂಬವಾಗಿರುವುದು ಕೂಡ ಬೆಲೆ ಏರಿಕೆಗೆ ಒಂದು ಕಾರಣವಾಗಬಹುದು. ಸುಗ್ಗಿಯ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿನ ಹೊಸ ಬೆಳೆ ಮಳೆಯಿಂದ ಹಾಳಾದರೆ ಈರುಳ್ಳಿ ಬೆಲೆ ಮತ್ತೂ ಹೆಚ್ಚಾಗಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಈಗಷ್ಟೇ ಟೊಮ್ಯಾಟೊ ಬೆಲೆ ಒಂದಿಷ್ಟು ಕಡಿಮೆಯಾಗುತ್ತಿರುವ ಮಧ್ಯೆ ಈರುಳ್ಳಿ ಬೆಲೆ ಗ್ರಾಹಕರ ಮಂಡೆ ಬಿಸಿ ಮಾಡಬಹುದು.
ಇದನ್ನೂ ಓದಿ : E-Commerce: ಶೇ 26ರಷ್ಟು ಬೆಳವಣಿಗೆ ದಾಖಲಿಸಿದ ಭಾರತದ ಇ-ಕಾಮರ್ಸ್ ಉದ್ಯಮ