ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಹಣಕಾಸು ಕಾಯ್ದೆ-2021 ಮತ್ತು ಎಲ್‌ಐಸಿ ಕಾಯಿದೆ 1956ರ ಕೆಲವು ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ಮೇಲೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಎಲ್‌ಐಸಿ ಐಪಿಒ ವಿರುದ್ಧದ ರಿಟ್ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ಒಪ್ಪಿಗೆ ನೀಡಿತ್ತು. ರಿಟ್ ಅರ್ಜಿಯನ್ನು ಎಲ್ಐಸಿಯಲ್ಲಿ ಪಾಲಿಸಿದಾರರಾದ ಮತ್ತು ಪೀಪಲ್ ಫಸ್ಟ್ ಎಂಬ ಸರ್ಕಾರೇತರ ಸಂಸ್ಥೆಯ ಜಂಟಿ ಸಂಚಾಲಕ ರಾಜೇಂದ್ರ ದೇವ್ ಸಲ್ಲಿಸಿದ್ದರು.
ಎಲ್‌ಐಸಿ ಐಪಿಒ ಪ್ರಕ್ರಿಯೆ ಮುಗಿದಿದ್ದು, ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಸಂಸ್ಥೆಗಳು ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳಾದ ಸೆಬಿ, ಐಆರ್‌ಡಿಎಐ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ಐಪಿಒ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು.
ಏನಿದು ಮಧ್ಯಂತರ ಪರಿಹಾರ?: ಮಧ್ಯಂತರ ಪರಿಹಾರವೆಂದರೆ, ನ್ಯಾಯಾಲಯವು ಎಲ್‌ಐಸಿ ಐಪಿಒ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಅರ್ಜಿಗೆ ಸಹಾಯವಾಗಿ ನಿಲ್ಲುವುದಾಗಿದೆ. ಅರ್ಜಿಯ ವಿಚಾರಣೆಯಿಂದ ಹಿಡಿದು, ತೀರ್ಪು ಬರುವವರಿಗೆ ಅರ್ಜಿಗೆ ಸಹಕಾರಿಯಾಗಿರುವುದೇ ಮಧ್ಯಂತರ ಪರಿಹಾರ. ಈಗ ಎಲ್‌ಐಸಿ ಐಪಿಒ ವಿಚಾರವಾಗಿ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಇದನ್ನೂ ಓದಿ: ಎಲ್‌ಐಸಿ ಐಪಿಒಗೆ ರದ್ದು ಕೋರಿ ರಿಟ್: ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಸುಪ್ರೀಂಕೋರ್ಟ್