ನವದೆಹಲಿ: ಭಾರತದ ಸ್ಟಾರ್ಟಪ್ ವಲಯದ ಫಂಡಿಂಗ್ ತೀವ್ರ ಇಳಿಕೆಯಾಗಿದ್ದು, 2023ರಲ್ಲಿ ಅತಿ ಹೆಚ್ಚು ಫಂಡಿಂಗ್ ಪಡೆದ ದೇಶಗಳ ಪಟ್ಟಿಯಲ್ಲಿ ದೇಶ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಸ್ಟಾರ್ಟಪ್ ಫಂಡಿಂಗ್ನಲ್ಲಿ 2021 ಮತ್ತು 2022 ರಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ದೇಶ ಯುಎಸ್, ಯುಕೆ ಮತ್ತು ಚೀನಾ ನಂತರ ನಾಲ್ಕನೇ ಸ್ಥಾನದಲ್ಲಿದೆ. ಈ ವರ್ಷ ಭಾರತದ ಸ್ಟಾರ್ಟಪ್ ವಲಯಕ್ಕೆ (ಡಿಸೆಂಬರ್ 5 ರವರೆಗೆ) ಕೇವಲ 7 ಬಿಲಿಯನ್ ಡಾಲರ್ ಹಣ ಮಾತ್ರ ಹರಿದು ಬಂದಿದೆ ಎಂದು ಜಾಗತಿಕ ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಟ್ರಾಕ್ಸ್ಎನ್ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.
ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತವು ಯುಎಸ್, ಯುಕೆ, ಚೀನಾ ಮತ್ತು ಫ್ರಾನ್ಸ್ ನಂತರ ಅತಿ ಹೆಚ್ಚು ಸ್ಟಾರ್ಟಪ್ ಫಂಡಿಂಗ್ ಪಡೆದ ದೇಶಗಳ ಪೈಕಿ ಐದನೇ ಸ್ಥಾನಕ್ಕೆ ಕುಸಿದಿದೆ. 2023 ರ ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಒಟ್ಟು 1.5 ಬಿಲಿಯನ್ ಡಾಲರ್ ಫಂಡಿಂಗ್ ಬಂದಿದೆ. ಇದು 2023 ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ಕಡಿಮೆಯಾಗಿದೆ ಮತ್ತು 2022 ರ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 54 ರಷ್ಟು ಕಡಿಮೆಯಾಗಿದೆ.
ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇಲ್ಲಿಯವರೆಗೆ ಅತ್ಯಂತ ಕಡಿಮೆ 957 ಮಿಲಿಯನ್ ಡಾಲರ್ ಫಂಡಿಂಗ್ ಬಂದಿದೆ. ಇದು 2016 ರ ಮೂರನೇ ತ್ರೈಮಾಸಿಕದ ನಂತರದ ಅತಿ ಕಡಿಮೆ ಫಂಡಿಂಗ್ ತ್ರೈಮಾಸಿಕವಾಗಿದೆ. "ಭಾರತವು ಫಂಡಿಂಗ್ ಕೊರತೆಯ ಪರಿಣಾಮಗಳನ್ನು ಅನುಭವಿಸುತ್ತಲೇ ಇದೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಫಂಡಿಂಗ್ ಹೆಚ್ಚಳದ ನಂತರ, ಭಾರತದ ಟೆಕ್ ಸ್ಟಾರ್ಟಪ್ ವಲಯ ಪ್ರತಿ ತ್ರೈಮಾಸಿಕದಲ್ಲಿ ಫಂಡಿಂಗ್ ಕುಸಿತ ಕಾಣುತ್ತಿದೆ" ಎಂದು ವರದಿ ತೋರಿಸಿದೆ.
ಹಣಕಾಸಿನ ಒಳಹರಿವು ಕಡಿಮೆಯಾಗುತ್ತಿದ್ದರೂ, ಈ ವರ್ಷ ಒಟ್ಟು ಫಂಡಿಂಗ್ ವಿಷಯದಲ್ಲಿ ಭಾರತವು ಅಗ್ರ 5 ದೇಶಗಳಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ. 2023 ರಲ್ಲಿ ಎಲ್ಲಾ ಹಂತಗಳಲ್ಲಿ ಫಂಡಿಂಗ್ ಕುಸಿತವಾಗಿದೆ. ಕೊನೆಯ ಹಂತದ ಫಂಡಿಂಗ್ ಶೇಕಡಾ 73 ರಷ್ಟು ಕಡಿಮೆಯಾದರೆ ಆರಂಭಿಕ ಹಂತದ ಫಂಡಿಂಗ್ ಶೇಕಡಾ 70 ರಷ್ಟು ಮತ್ತು ಸೀಡ್ ಹಂತದ ಫಂಡಿಂಗ್ ಶೇಕಡಾ 60ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. 100 ಮಿಲಿಯನ್ ಡಾಲರ್ಗಿಂತ ಹೆಚ್ಚು ಫಂಡಿಂಗ್ ಬಂದ ಸುತ್ತುಗಳ ಸಂಖ್ಯೆ ಕೇವಲ 17 ಆಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 69 ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಅತಿದೊಡ್ಡ ಐಫೋನ್ ಘಟಕ ಸ್ಥಾಪಿಸಲಿದೆ ಟಾಟಾ ಗ್ರೂಪ್; 50 ಸಾವಿರ ಉದ್ಯೋಗಾವಕಾಶ ಸಾಧ್ಯತೆ