ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಯ(ಐಪಿಒ) ಮೂಲಕ ಷೇರು ವಿತರಣೆ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಕೋರಿ ಕೆಲವು ಪಾಲಿಸಿದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾ.ಡಿ.ವೈ.ಚಂದ್ರಚೂಡ್, ನ್ಯಾ.ಸೂರ್ಯಕಾಂತ್ ಹಾಗು ಪಿ.ಎಸ್. ನರಸಿಂಹ ಅವರಿದ್ದ ಪೀಠ ಈ ಸಂಬಂಧ ಪ್ರತಿಕ್ರಿಯಿಸಿ, ವಾಣಿಜ್ಯ ಹೂಡಿಕೆ ಮತ್ತು ಐಪಿಒ ವಿಚಾರವಾಗಿ ಮಧ್ಯಪ್ರವೇಶಿಸಿ ಮಧ್ಯಂತರ ತಡೆ ನೀಡಲು ಕೋರ್ಟ್ ಬಯಸುವುದಿಲ್ಲ ಎಂದಿತು.
ಇದೇ ವೇಳೆ, ಪಾಲಿಸಿದಾರರ ಕಳವಳ ಸಂಬಂಧ, ಕೇಂದ್ರ ಸರ್ಕಾರ ಹಾಗು ಎಲ್‌ಐಸಿಗೆ ಉತ್ತರಿಸಲು ಎಂಟು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಅರ್ಜಿದಾರರಿಗೆ ತಿಳಿಸಿತು. ಎಲ್‌ಐಸಿ ಐಪಿಒ ಮೇ 4ರಂದು ಸಗಟು ಮತ್ತು ಇತರೆ ಹೂಡಿಕೆದಾರರಿಗೆ ಐಪಿಒ ಪ್ರಕ್ರಿಯೆ ಆರಂಭಿಸಿದ್ದು, ಗುರುವಾರ ಷೇರು ಹಂಚಿಕೆ ನಡೆಯಲಿದೆ.