ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಗಳು ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ನಷ್ಟವುಂಟಾಗಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಮತ್ತೆ ಹೊಸದಾಗಿ ಪಾಲಿಸಿ ರೇಟ್ಗಳನ್ನು ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಕುಸಿಯುತ್ತಿವೆ ಎನ್ನಲಾಗಿದೆ.
ಆರಂಭಿಕ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 0.8 ರಿಂದ 0.9 ರ ಮಧ್ಯೆ ವಹಿವಾಟು ನಡೆಸಿದವು. ಅಮೆರಿಕದಲ್ಲಿ ಹಣಕಾಸು ನೀತಿಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿರುವುದರಿಂದ ಹೂಡಿಕೆದಾರರು ಉತ್ತಮ ಮತ್ತು ಸ್ಥಿರ ಆದಾಯಕ್ಕಾಗಿ ಅಮೆರಿಕ ಮಾರುಕಟ್ಟೆಗಳತ್ತ ಹೋಗುವ ಸಾಧ್ಯತೆಗಳಿವೆ.
ರೂಪಾಯಿ ಕುಸಿತ: ಇನ್ನು ಭಾರತದ ರೂಪಾಯಿ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಡಾಲರ್ ವಿರುದ್ಧ ಮತ್ತೊಂದು ಐತಿಹಾಸಿಕ ಕುಸಿತ ಕಂಡಿದೆ. ಡಾಲರ್ ವಿರುದ್ಧ 25 ಪೈಸೆ ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ ದಾಖಲೆಯ 81.09 ಗೆ ಕುಸಿಯಿತು. ಗುರುವಾರ ರೂಪಾಯಿ ಮೌಲ್ಯ 80.86 ಆಗಿತ್ತು. ರೂಪಾಯಿ ಮೌಲ್ಯದಲ್ಲಿ ನಿನ್ನೆಯ ಇಳಿಕೆಯು ಫೆಬ್ರವರಿ 24 ರ ನಂತರ ಒಂದೇ ದಿನದಲ್ಲಾದ ಅತಿ ಹೆಚ್ಚು ಇಳಿಕೆಯಾಗಿದೆ.
ಅಮೆರಿಕ ಫೆಡರಲ್ ರಿಸರ್ವ್ ರೆಪೋ ದರವನ್ನು 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಅದೇ ಪ್ರಮಾಣದಲ್ಲಿ ಸತತ ಮೂರನೇ ಏರಿಕೆಯಾಗಿದೆ. ಅಮೆರಿಕ ಫಡೆರಲ್ನ ಈ ಕ್ರಮ ನಿರೀಕ್ಷಿತವೇ ಆಗಿದೆ. ಯುಎಸ್ ಫೆಡ್ ದರ ಏರಿಕೆಗಳು ಇನ್ನೂ ಹೆಚ್ಚಾಗಲಿವೆ ಮತ್ತು ಈ ದರಗಳು 2024 ರವರೆಗೆ ಹೆಚ್ಚಾಗುತ್ತಿರುತ್ತವೆ ಎಂದು ಊಹಿಸಲಾಗಿದೆ.
ಕಡಿಮೆಯಾದ ವಿದೇಶಿ ವಿನಿಮಯ: ಭಾರತದ ವಿದೇಶಿ ವಿನಿಮಯ ಮೀಸಲು ಎರಡು ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಈ ವರ್ಷದ ಆರಂಭದಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ವಿದೇಶಿ ವಿನಿಮಯ ಮೀಸಲು ಸುಮಾರು 80 ಶತಕೋಟಿ ಡಾಲರ್ಗಳಷ್ಟು ಕಡಿಮೆಯಾಗಿದೆ.
ಭಾರತೀಯ ರೂಪಾಯಿ ಮೌಲ್ಯದ ಕುಸಿತವನ್ನು ತಡೆಗಟ್ಟಲು ಆರ್ಬಿಐ ಮಧ್ಯ ಪ್ರವೇಶಿಸುತ್ತಿರುವುದರಿಂದ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನು ಓದಿ: ದೀರ್ಘಾವಧಿ ಠೇವಣಿ ಉತ್ತಮವೇ? ಇಲ್ಲಾ ಅಲ್ಪಾವಧಿ ಎಫ್ಡಿನೇ ಬೆಸ್ಟಾ? ಇಲ್ಲಿದೆ ಕೆಲ ಸಲಹೆ!