ನವದೆಹಲಿ : ಭಾರತದಲ್ಲಿ ಕ್ವಿಕ್ ಕಾಮರ್ಸ್ ವಲಯವು ಗಮನಾರ್ಹ ವಿಸ್ತರಣೆ ಕಾಣುತ್ತಿದ್ದು, ಡೆಲಿವರಿ ಬಾಯ್ ಜಾಬ್ಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗಿದೆ. ಏಪ್ರಿಲ್ 2021 ರಿಂದ ಏಪ್ರಿಲ್ 2023ರ ಅವಧಿಯಲ್ಲಿ ಡೆಲಿವರಿ ಜಾಬ್ಗಳಿಗೆ ಶೇ 68ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷದಲ್ಲಿ ಡೆಲಿವರಿ ಜಾಬ್ಗಳಿಗೆ ಶೇ 30ರಷ್ಟು ಹೆಚ್ಚು ಬೇಡಿಕೆ ಹೊಂದಿರುವ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಡೆಲಿವರಿ ಜಾಬ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಆಹಾರ, ದಿನಸಿ, ಚಿಲ್ಲರೆ ವ್ಯಾಪಾರ ಮತ್ತು ಆನ್‌ಲೈನ್ ಶಾಪಿಂಗ್‌ನಂತಹ ವಿಭಾಗಗಳಲ್ಲಿ ಆನ್ ಡಿಮ್ಯಾಂಡ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗುವ ಪ್ರವೃತ್ತಿ ಮುಂದುವರಿಯಲಿದೆ. ಪೋರ್ಟಲ್‌ನಲ್ಲಿ ಡೆಲಿವರಿ ಜಾಬ್ ಪೋಸ್ಟಿಂಗ್‌ಗಳು ಅದೇ ಅವಧಿಯಲ್ಲಿ ಶೇಕಡಾ 17 ರಷ್ಟು ಹೆಚ್ಚಾಗಿದೆ.
ಐಪಿಎಲ್ನಂಥ ಪಂದ್ಯಾವಳಿಗಳು ಸೇರಿದಂತೆ ಟಿವಿಯಲ್ಲಿ ಇನ್ನೂ ಹಲವಾರು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ಟ್ರೆಂಡ್ ಹೆಚ್ಚಾಗಿರುವುದು ಕಂಡು ಬಂದಿದೆ. ಹೀಗಾಗಿ ಬಹುತೇಕ ಮಹಾನಗರಗಳಲ್ಲಿ ಆನ್‌ಲೈನ್ ಸರಕು ಡೆಲಿವರಿ ಉದ್ಯೋಗಿಗಳ ಬೇಡಿಕೆ ಹೆಚ್ಚಾಗುತ್ತಿದೆ. "ವೈಯಕ್ತಿಕ ಆದಾಯ ಹೆಚ್ಚಿಸಿಕೊಳ್ಳಲು ಭಾರತದಲ್ಲಿ ಜನರು ತಮ್ಮ ದಿನನಿತ್ಯದ ಉದ್ಯೋಗದ ಜೊತೆಗೆ ಡೆಲಿವರಿ ಜಾಬ್ಗಳನ್ನು ಸಹ ಮಾಡುತ್ತಿದ್ದಾರೆ" ಎಂದು ಇಂಡೀಡ್ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಶಶಿ ಕುಮಾರ್ ಹೇಳಿದರು.
ಇನ್ನು ಡೆಲಿವರಿ ಬಾಯ್ ಕೆಲಸ ಮಾಡಲು ಬಾಡಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬೈಕ್ಗಳು ಸುಲಭವಾಗಿ ಸಿಗುತ್ತಿರುವುದು ಈ ಕೆಲಸ ಮತ್ತೂ ಆಕರ್ಷಕವಾಗಲು ಕಾರಣವಾಗಿದೆ. ಈಗ ಬಾಡಿಗೆಗೆ ಬೈಕ್ ಸಿಗುತ್ತಿರುವುದರಿಂದ ಬೈಕರ್ ಆಗಲು ಬಯಸುವರಿಗೆ ವಾಹನ ಕೊಳ್ಳುವುದು ಅನಿವಾರ್ಯವಾಗಿಲ್ಲ. ಇದರಿಂದ ಇಎಂಐ ಕಟ್ಟುವುದು ಕೂಡ ತಪ್ಪಿದೆ.
ಡೆಲಿವರಿ ಬಾಯ್ ಜಾಬ್ಗಳಿಗಾಗಿ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಗಮನಾರ್ಹ ಪ್ರಮಾಣದ ಬೇಡಿಕೆ ಕಂಡು ಬರುತ್ತಿದೆ ಎಂದು ಕುಮಾರ್ ಹೇಳಿದರು. ಡೆಲಿವರಿ ಬಾಯ್ ಉದ್ಯೋಗಕ್ಕಾಗಿ ಶೇ 11ರಷ್ಟು ಬೇಡಿಕೆಯೊಂದಿಗೆ ಚೆನ್ನೈ ಟಾಪ್ನಲ್ಲಿದೆ. ಎರಡನೇ ಹಂತದ ನಗರಗಳಾದ ಎರ್ನಾಕುಲಂ, ತಿರುಚ್ಚಿರಾಪಳ್ಳಿ, ಮಧುರೈ, ಪಾಟ್ನಾ ಮತ್ತು ಮೊಹಾಲಿಯಂತಹ ನಗರಗಳಲ್ಲಿ ಈ ಬೇಡಿಕೆ ಶೇಕಡಾ 7 ರಷ್ಟಿದೆ ಎಂದು ವರದಿ ಉಲ್ಲೇಖಿಸಿದೆ.
ಕ್ವಿಕ್ ಕಾಮರ್ಸ್ ಎಂಬುದು ಐ-ಕಾಮರ್ಸ್‌ನ ವಿಕಾಸದ ಮುಂದಿನ ಹಂತವಾಗಿದೆ ಮತ್ತು ಹೆಸರೇ ಸೂಚಿಸುವಂತೆ ಇದು ವೇಗವಾಗಿ ಸರಕು ಪೂರೈಕೆಯನ್ನು ಸೂಚಿಸುತ್ತದೆ. ಗ್ರಾಹಕರು ತಾವು ಆರ್ಡರ್ ಮಾಡಿದ ಒಂದು ಗಂಟೆಯೊಳಗೆ ವಿತರಣೆಯನ್ನು ನಿರೀಕ್ಷಿಸಬಹುದು. ಕ್ವಿಕ್ ಕಾಮರ್ಸ್ ಇದು ಗ್ರಾಹಕರಿಗೆ ಅಲ್ಟ್ರಾ-ಫಾಸ್ಟ್ ಸೇವೆಯ ಪ್ರಯೋಜನವನ್ನು ತರುತ್ತದೆ. ಇದರಿಂದ ಕಂಪನಿಗಳಿಗೂ ಸಹ ಸಾಕಷ್ಟು ಲಾಭಗಳಿವೆ. ಕ್ವಿಕ್ ಕಾಮರ್ಸ್ ಎಂಬ ಪದವು ತುಲನಾತ್ಮಕವಾಗಿ ಹೊಸ ಪದವಾಗಿದೆ ಮತ್ತು ಇಲ್ಲಿಯವರೆಗೆ ಇದು ಐ-ಕಾಮರ್ಸ್‌ನಲ್ಲಿ ಹೆಚ್ಚಾಗಿ ಬಳಸದೆ ಉಳಿದಿರುವ ವಿಭಾಗವಾಗಿದೆ. ಗ್ರಾಹಕರು ತಮಗೆ ಹೆಚ್ಚು ಅನುಕೂಲಕರವಾದ ಆಯ್ಕೆಗಳನ್ನು ನಿರೀಕ್ಷಿಸುವುದರಿಂದ ಕ್ವಿಕ್ ಕಾಮರ್ಸ್ ವಿಭಾಗ ಮತ್ತಷ್ಟು ಜನಪ್ರಿಯವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : 28ನೇ ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದ ಕಾಮಿ ರೀಟಾ ಶೆರ್ಪಾ