ನವದೆಹಲಿ: ಮಹತ್ವದ ಹೆಜ್ಜೆಯೊಂದರಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ಬಫರ್ ಸ್ಟಾಕ್ ಮಿತಿಯನ್ನು 3 ಲಕ್ಷ ಮೆಟ್ರಿಕ್ ಟನ್ಗಳಿಂದ 5 ಲಕ್ಷ ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಿದೆ. ಈಗಾಗಲೇ ಕೇಂದ್ರ ಸರ್ಕಾರ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ನಲ್ಲಿ ಇಟ್ಟುಕೊಂಡಿದ್ದು, ಈಗ ಹೆಚ್ಚುವರಿಯಾಗಿ ಇನ್ನೂ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ದಾಸ್ತಾನಿಗೆ ಮುಂದಾಗಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದರ ಹೊರತಾಗಿ, ಬಫರ್ ಸ್ಟಾಕ್ನಿಂದ ಈರುಳ್ಳಿಯನ್ನು ಸೋಮವಾರದಿಂದ ದೆಹಲಿಯಲ್ಲಿ (ಆಗಸ್ಟ್ 21) ಚಿಲ್ಲರೆ ಮಳಿಗೆಗಳು ಮತ್ತು ಎನ್ಸಿಸಿಎಫ್ ನ ಮೊಬೈಲ್ ವ್ಯಾನ್ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇತರ ಏಜೆನ್ಸಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಮುಂಬರುವ ದಿನಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಲಾಗುವುದು.
ಈಗಾಗಲೇ ಪ್ರಮುಖ ದಾಸ್ತಾನು ಕೇಂದ್ರಗಳಲ್ಲಿ ಸಂಗ್ರಹಿಸಿದ ದಾಸ್ತಾನುಗಳನ್ನು ಅಗತ್ಯಕ್ಕೆ ತಕ್ಕಂತೆ ವಿಲೇವಾರಿ ಮಾಡುವುದರ ಜೊತೆಗೆ ಹೆಚ್ಚುವರಿ ಖರೀದಿ ಗುರಿಯನ್ನು ಸಾಧಿಸಲು ತಲಾ 1 ಲಕ್ಷ ಟನ್ ಈರುಳ್ಳಿ ಸಂಗ್ರಹಿಸುವಂತೆ ಎನ್ಸಿಸಿಎಫ್ ಮತ್ತು ನಾಫೆಡ್ಗೆ ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ದೇಶನ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಖಿಲ ಭಾರತ ಸರಾಸರಿಗಿಂತ ಚಿಲ್ಲರೆ ಬೆಲೆ ಹೆಚ್ಚಾಗಿರುವ ಅಥವಾ ಹಿಂದಿನ ತಿಂಗಳಿಗಿಂತ ಗಮನಾರ್ಹವಾಗಿ ಹೆಚ್ಚಿರುವ ರಾಜ್ಯಗಳ ಪ್ರಮುಖ ಮಾರುಕಟ್ಟೆಗಳಿಗೆ ಬಫರ್ ಸ್ಟಾಕ್ನಿಂದ ಈರುಳ್ಳಿ ವಿಲೇವಾರಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಬಫರ್ನಿಂದ ಸುಮಾರು 1,400 ಮೆಟ್ರಿಕ್ ಟನ್ ಈರುಳ್ಳಿಯನ್ನು ಉದ್ದೇಶಿತ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ.
ಬಫರ್ಗಾಗಿ ಖರೀದಿ ಮಾಡುವುದು, ಇರುವ ದಾಸ್ತಾನನ್ನು ಅಗತ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡುವುದು ಮತ್ತು ರಫ್ತು ಸುಂಕ ವಿಧಿಸುವಂಥ ಕ್ರಮಗಳ ಮೂಲಕ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆಯಾಗದಂತೆ ಸರ್ಕಾರ ಪ್ರಯತ್ನಿಸುತ್ತಿದೆ. ಅದೇ ಕಾಲಕ್ಕೆ ರೈತರಿಗೆ ಲಾಭದಾಯಕ ಬೆಲೆ ಸಿಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಈರುಳ್ಳಿಯ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರವು ಶನಿವಾರ (ಆಗಸ್ಟ್ 19) ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕ ವಿಧಿಸಿರುವುದು ಗಮನಾರ್ಹ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿನ ಈರುಳ್ಳಿಯ ಭಾರತದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಲಾಸಲ್ಗಾಂವ್ನಲ್ಲಿ ಕ್ವಿಂಟಾಲ್ಗೆ 1,000-1,100 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಆಗಸ್ಟ್ ಆರಂಭದಿಂದ ಕ್ವಿಂಟಾಲ್ಗೆ 2,200-2,300 ರೂ.ಗಳನ್ನು ದಾಟಿದೆ. ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಸಂಗ್ರಹಣೆ ಮತ್ತು ಆವಕದಿಂದ ಬೆಲೆ ಹೆಚ್ಚಾಗುತ್ತಿವೆ. ಹೆಚ್ಚಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ, ಈರುಳ್ಳಿ ಕೆ.ಜಿ.ಗೆ 30-35 ರೂ.ಗೆ ಮಾರಾಟವಾಗುತ್ತಿದೆ.
ಕೃಷಿ ಉತ್ಪನ್ನ ರಫ್ತು ಉತ್ತೇಜನ ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಂಕಿಅಂಶಗಳ ಪ್ರಕಾರ, 2022-23ರ ಆರ್ಥಿಕ ವರ್ಷದಲ್ಲಿ ಭಾರತವು 25.25 ಲಕ್ಷ ಟನ್ ಈರುಳ್ಳಿ ಅನ್ನು ರಫ್ತು ಮಾಡಿದೆ. ಇದು 2021-22ರಲ್ಲಿ ಆಗಿದ್ದ 15.37 ಲಕ್ಷ ಟನ್ ಮತ್ತು 2020-21ರಲ್ಲಿ ಆಗಿದ್ದ 15.78 ಲಕ್ಷ ಟನ್ಗೆ ಹೋಲಿಸಿದರೆ ಅತ್ಯಧಿಕವಾಗಿದೆ.
ಇದನ್ನೂ ಓದಿ : ಅಚ್ಚುಮೆಚ್ಚಿನ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದ ಯುಪಿಐ; 83 ಲಕ್ಷ ಕೋಟಿ ರೂ. ವಹಿವಾಟು!