ನವದೆಹಲಿ: ವಿಶ್ವದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಇಂಧನ ನೀತಿಗಳನ್ನು ನೋಡಿದರೆ 2030ರ ವೇಳೆಗೆ ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಲಿದ್ದು, ಆ ವೇಳೆಗೆ ವಿಶ್ವದಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಈಗಿರುವುದಕ್ಕಿಂತ 10 ಪಟ್ಟು ಹೆಚ್ಚಳವಾಗಲಿದೆ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಮಂಗಳವಾರ ತಿಳಿಸಿದೆ. ಐಇಎಯ ಹೊಸ 'ವರ್ಲ್ಡ್ ಎನರ್ಜಿ ಔಟ್ಲುಕ್ 2023' ವರದಿಯ ಪ್ರಕಾರ ಜಾಗತಿಕ ವಿದ್ಯುತ್ ವಲಯದಲ್ಲಿ ನವೀಕರಿಸಬಹುದಾದ ಇಂಧನಗಳ ಪಾಲು ಪ್ರಸ್ತುತ ಶೇಕಡಾ 30 ರಿಂದ 2030 ರ ವೇಳೆಗೆ ಶೇಕಡಾ 50 ಕ್ಕೆ ತಲುಪಲಿದೆ.
"ವಿಶ್ವಾದ್ಯಂತ ಶುದ್ಧ ಇಂಧನ ಬಳಕೆಯತ್ತ ಪರಿವರ್ತನೆಯಾಗುತ್ತಿದೆ ಮತ್ತು ಇದನ್ನು ತಡೆಯಲಾಗದು. ಶುದ್ಧ ಇಂಧನ ಬಳಕೆ ಎಷ್ಟು ಬೇಗ ಆಗುತ್ತದೆಯೋ ವಿಶ್ವಕ್ಕೆ ಅಷ್ಟು ಒಳ್ಳೆಯದು" ಎಂದು ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಹೇಳಿದರು. 2030 ರ ವೇಳೆಗೆ ಕಡಲತಡಿಯಲ್ಲಿನ ಹೊಸ ಪವನ ಯಂತ್ರ ಯೋಜನೆಗಳಲ್ಲಿ ಹೂಡಿಕೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ನೀತಿ ನಿಯಮಗಳ ಪ್ರಕಾರ 2030 ರ ವೇಳೆಗೆ ನವೀಕರಿಸಬಹುದಾದ ಇಂಧನಗಳು ಹೊಸ ವಿದ್ಯುತ್ ಉತ್ಪಾದನಾ ಸಾಮರ್ಥ್ಯಕ್ಕೆ ಶೇಕಡಾ 80 ರಷ್ಟು ಕೊಡುಗೆ ನೀಡಲಿವೆ. ಈ ವಿಸ್ತರಣೆಯಲ್ಲಿ ಸೌರ ವಿದ್ಯುತ್ ಮಾತ್ರವೇ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಲಿದೆ ಎಂದು ವರದಿ ತಿಳಿಸಿದೆ. ದೇಶಗಳು ತಮ್ಮ ರಾಷ್ಟ್ರೀಯ ಇಂಧನ ಮತ್ತು ಹವಾಮಾನ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಪೂರ್ಣವಾಗಿ ಪೂರೈಸಿದರೆ, ಶುದ್ಧ ಇಂಧನ ಬಳಕೆಯ ಪ್ರಗತಿ ಇನ್ನೂ ವೇಗವಾಗಿ ಆಗಲಿದೆ. ಆದಾಗ್ಯೂ, ಜಾಗತಿಕ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವ ಗುರಿಯನ್ನು ಸಾಧಿಸಲು ಇನ್ನೂ ಬಲವಾದ ಕ್ರಮಗಳು ಬೇಕಾಗುತ್ತವೆ ಎಂದು ಐಇಎ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಾಗತಿಕವಾಗಿ ದಶಕಗಳಿಂದ ಸುಮಾರು 80 ಪ್ರತಿಶತ ಮಟ್ಟದಲ್ಲಿ ಸ್ಥಿರವಾಗಿರುವ ಪಳೆಯುಳಿಕೆ ಇಂಧನಗಳ ಪಾಲು 2030 ರ ವೇಳೆಗೆ ಶೇಕಡಾ 73 ಕ್ಕೆ ಇಳಿಕೆಯಾಗಲಿದೆ ಮತ್ತು ಜಾಗತಿಕ ಇಂಧನ ಸಂಬಂಧಿತ ಇಂಗಾಲದ ಡೈಆಕ್ಸೈಡ್ (ಸಿಒ 2) ಹೊರಸೂಸುವಿಕೆಯು 2025 ರ ವೇಳೆಗೆ ಉತ್ತುಂಗಕ್ಕೇರಲಿದೆ ಎಂದು ವರದಿ ಉಲ್ಲೇಖಿಸಿದೆ. "ಶುದ್ಧ ಇಂಧನ ಬಳಕೆಗಾಗಿ ಪ್ರತಿಯೊಂದು ದೇಶವು ತನ್ನದೇ ಆದ ಮಾರ್ಗ ಕಂಡುಕೊಳ್ಳಬೇಕಾಗಿದೆ. ಹಾಗೆಯೇ ಶುದ್ಧ ಇಂಧನ ಪರಿವರ್ತನೆಗಳನ್ನು ವೇಗಗೊಳಿಸಲು ಅಂತರರಾಷ್ಟ್ರೀಯ ಸಹಕಾರ ನಿರ್ಣಾಯಕವಾಗಿದೆ" ಎಂದು ಫಾತಿಹ್ ಬಿರೋಲ್ ತಿಳಿಸಿದರು.
ಇದನ್ನೂ ಓದಿ : 2030ಕ್ಕೆ ಜಪಾನ್ ಹಿಂದಿಕ್ಕಿ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಎಸ್&ಪಿ ವರದಿ