ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕ ಕಂಪನಿ ಮಾರುತಿ ಸುಜಿಕಿ ಇಂಡಿಯಾ ಬರೋಬ್ಬರಿ 87,599 ಕಾರುಗಳನ್ನು ರಿಕಾಲ್ ಮಾಡುವುದಾಗಿ ಘೋಷಿಸಿದೆ. ಜುಲೈ 5, 2021 ಮತ್ತು ಫೆಬ್ರವರಿ 15, 2023 ರ ನಡುವೆ ತಯಾರಿಸಲಾದ ಎಸ್‌ಪ್ರೆಸ್ಸೋ ಹಾಗೂ ಎಕೋ ಕಾರ್‌ಗಳ ಸ್ಟೇರಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದ ಹಿನ್ನೆಲೆ ಕಾರುಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಸೋಮವಾರ ಪ್ರಕಟಣೆ ಮೂಲಕ ತಿಳಿಸಿದೆ.
ಸ್ಟೀರಿಂಗ್ ಟೈ ರಾಡ್‌ನ ಒಂದು ಭಾಗದಲ್ಲಿ ದೋಷ ಕಂಡುಬಂದಿದೆ. ಇದು ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಪನಿ ಮಾಹಿತಿ ನೀಡಿದೆ. ರಿಕಾಲ್ ಮಾಡಿದ ಕಾರುಗಳನ್ನು ಪರಿಶೀಲನೆ ಮಾಡಲಾಗುವುದು, ಬದಲಾವಣೆ ಮಾಡಬೇಕಾದ ಅಗತ್ಯವಿದ್ದಲ್ಲಿ ಸ್ಟೇರಿಂಗ್ ಟೈ ರಾಡ್‌ಅನ್ನು ಬದಲಾವಣೆ ಮಾಡುವುದಾಗಿ ತಿಳಿಸಿದೆ. ಸಮಸ್ಯೆ ಹೊಂದಿರುವ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ವರ್ಕ್‌ಶಾಪ್‌ಗಳಿಂದ ದೋಷಯುಕ್ತ ಭಾಗವನ್ನು ತಪಾಸಣೆ ಮತ್ತು ಬದಲಿಗಾಗಿ ಸಂಪರ್ಕಿಸಿ ಎಂದು ಹೇಳಿದೆ. ಕಾರುಗಳನ್ನು ಹಿಂಪಡೆಯುವಿಕೆ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಆರ್‌ಆರ್‌ಟಿಎಸ್ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ದೆಹಲಿ ಸರ್ಕಾರದ ಒಪ್ಪಿಗೆ
ಈ ಹಿಂದೆಯೂ ಕಾರುಗಳನ್ನು ರಿಕಾಲ್ ಮಾಡಿದ್ದ ಮಾರುತಿ ಸುಜುಕಿ: ಇನ್ನು ಮಾರುತಿ ಸುಜುಕಿ ಕಳೆದ ವರ್ಷ ಆಗಸ್ಟ್ನಲ್ಲಿ ಏರ್‌ಬ್ಯಾಗ್ ನಿಯಂತ್ರಣ ಘಟಕವನ್ನು ಬದಲಿಸಲು ಕಾರುಗಳನ್ನು ಹಿಂಪಡೆದಿತ್ತು. ಮಾರುತಿ ಸುಜುಕಿ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಡಿಸೈರ್ ಟೂರ್ ಎಸ್ ಕಾರುಗಳಲ್ಲಿನ ಏರ್ ಬ್ಯಾಗ್ ನಿಯಂತ್ರಣವನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿತ್ತು. ಕಾರುಗಳಿಗೆ ಹೊಸ ಏರ್‌ಬ್ಯಾಗ್‌ಗಳನ್ನು ಸೇರಿಸಲು ತಗಲುವ ವೆಚ್ಚವನ್ನು ಕಂಪನಿಯೇ ಭರಿಸಲಿದೆ. ಇದನ್ನು ಸರಿಪಡಿಸದಿದ್ದರೆ, ಭವಿಷ್ಯದ ಈ ದೋಷವು ಇನ್ನಷ್ಟು ಹದಗೆಡಬಹುದು. ವಾಹನಗಳ ಗ್ರಾಹಕರು ಏರ್ ಬ್ಯಾಗ್ ನಿಯಂತ್ರಣ ಘಟಕವನ್ನು ಬದಲಾಯಿಸುವವರೆಗೆ ವಾಹನವನ್ನು ಓಡಿಸದಂತೆ ಸೂಚನೆ ನೀಡಿತ್ತು.
2021 ಸೆಪ್ಟೆಂಬರ್‌ನಲ್ಲಿ ಮಾರುತಿ ಸುಜುಕಿ ಕಂಪನಿ, ಸೀಟ್‌ಬೆಲ್ಟ್ ದೋಷವರುವ ಸುಮಾರು 5 ಸಾವಿರ ಕಾರುಗಳನ್ನು ಹಿಂಪಡೆದಿತ್ತು ಮತ್ತು ಅದೇ ವರ್ಷದ ಡಿಸೆಂಬರ್‌ನಲ್ಲಿ ಮುಂದಿನ ಸಾಲಿನ ಸೀಟ್ ಬೆಲ್ಟ್‌ಗಳ ಒಂದು ಭಾಗದಲ್ಲಿನ ದೋಷ ಕಂಡುಬಂದ ಹಿನ್ನೆಲೆ 9,125 ಕಾರುಗಳನ್ನು ಹಿಂಪಡೆದಿತ್ತು.
ಇನ್ನು 2019ರಲ್ಲಿ ಮಾರುತಿ ಸುಜುಕಿ ಕಂಪನಿ 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. 2018ರ ನವೆಂಬರ್ 15 ರಿಂದ 2019ರ ಆಗಸ್ಟ್ 12 ರವರೆಗೆ ತಯಾರಿಸಲಾದ 1 ಲೀಟರ್ ಎಂಜಿನ್ ಸಾಮರ್ಥ್ಯದ ವ್ಯಾಗನ್ ಆರ್ ಕಾರುಗಳಲ್ಲಿ ಸುರಕ್ಷಾ ದೋಷಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಕಾರುಗಳನ್ನು ಮರಳಿ ಪಡೆದಿತ್ತು. ಇಂಧನದ ಕೊಳವೆ ಮತ್ತು ಮೆಟಲ್ ಕ್ಲ್ಯಾಂಪ್ ನಲ್ಲಿ ದೋಷಗಳಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಕಾರು ಖರೀದಿಸಿದ್ದಲ್ಲಿ ಮಾರುತಿ ಸುಜುಕಿ ಡೀಲರ್ ಸಂಪರ್ಕಿಸಿ ದೋಷಗೊಂಡಿರುವ ಭಾಗವನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿತ್ತು.
ಇದನ್ನೂ ಓದಿ: ಮಾರುಕಟ್ಟೆಗೆ ಬಂತು 5 ಬಾಗಿಲಿನ ಮಾರುತಿ ಸುಜುಕಿ ಜಿಮ್ನಿ: ದರ, ವಿಶೇಷತೆ ಹೀಗಿದೆ..