ಕಳೆದ ಕೆಲವು ತಿಂಗಳಿಂದ ಕಾರುಪ್ರಿಯರಲ್ಲಿ ಸಾಕಷ್ಟು ರೋಮಾಂಚನ, ನಿರೀಕ್ಷೆ ಹುಟ್ಟಿಸಿದ್ದ ಮಾರುತಿ ಸುಜುಕಿ ಜಿಮ್ನಿ ಕಾರು ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಚ್ಚ ಹೊಸ ಅತ್ಯಾಧುನಿಕ ವಾಹನದ ಬೆಲೆಗಳನ್ನು ಪ್ರಕಟಿಸಲಾಗಿದೆ. ಈಗಾಗಲೇ ಇದರ ಬುಕ್ಕಿಂಗ್ ಸಹ ಆರಂಭವಾಗಿದೆ. ಈವರೆಗೆ 30 ಸಾವಿರ ಆರ್ಡರ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಜಿಮ್ನಿ ಬೆಲೆ 12.74 ಲಕ್ಷ ರೂಪಾಯಿಯಿಂದ ಶುರುವಾಗಿ 15.05 ಲಕ್ಷ ರೂಪಾಯಿವರೆಗೂ ಇದೆ. ಇದೇ ತಿಂಗಳು ಈ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವುದಾಗಿಯೂ ವಿತರಕರು ತಿಳಿಸಿದ್ದಾರೆ.
ಜಿಮ್ನಿ ಎಂಜಿನ್ ಮತ್ತು ವಿಶೇಷತೆಗಳು ಹೀಗಿವೆ..: ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2023ರಲ್ಲಿ ಅನಾವರಣಗೊಂಡ ಸಮಯದಿಂದ ಅನೇಕರು ಜಿಮ್ನಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದರು. 1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತಿರುವ ಈ ಮಾರುತಿ ಸುಜುಕಿ ಜಿಮ್ನಿ 105 ಹೆಚ್ಪಿ ಪವರ್ ಮತ್ತು 134 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್, 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಮಾರುತಿ ಸುಜುಕಿ ಜಿಮ್ನಿ - ಫ್ರಾಂಕ್ಸ್ SUV ಬಿಡುಗಡೆ
5 ಬಾಗಿಲಿನ ಕಾರು: ಮ್ಯಾನುವಲ್ ರೂಪಾಂತರವು ಪ್ರತಿ ಲೀಟರ್ಗೆ 16.94 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಅದೇ ಸ್ವಯಂಚಾಲಿತ ರೂಪಾಂತರವು ಪ್ರತಿ ಲೀಟರ್ಗೆ 16.39 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಐದು ಬಾಗಿಲುಗಳೊಂದಿಗೆ ಬರುತ್ತಿರುವ ಈ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು ಆಲ್ಫಾ ಮತ್ತು ಝೀಟಾ ಎಂಬ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಸ್ವಯಂಚಾಲಿತ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಮಾರುತಿ ಸುಜುಕಿ ಜಿಮ್ನಿ ಆಲ್ಫಾ ಟ್ರಿಮ್, 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಅಳವಡಿಸಲಾಗಿದೆ. ಈ ಎಸ್ಯುಸಿ ಏಳು ಬಣ್ಣಗಳಲ್ಲಿ ಲಭ್ಯವಿದೆ. ಐದು ಬಾಗಿಲುಗಳಿದ್ದರೂ ಇದು ನಾಲ್ಕು ಆಸನಗಳ ವಾಹನ ಎಂಬುದು ಗಮನಾರ್ಹ. ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಮಾರುತಿ ಸುಜುಕಿ ಜಿಮ್ನಿ ಕಾರು ಪೈಪೋಟಿ ನೀಡಲಿದೆ ಎಂದು ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ಇದನ್ನೂ ಓದಿ: ಜಾಗತಿಕ ಉತ್ಪಾದನೆಯ ಶಕ್ತಿಯಾಗುವತ್ತ ಭಾರತ: ಮಾರುತಿ ಜಿಮ್ನಿ ಕಾರು ರಫ್ತು ಶುರು