ನವದೆಹಲಿ: ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇದೀಗ ತನ್ನೆಲ್ಲಾ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೊಳ್ಳಲಿದೆ. ಇನ್ಪುಟ್ ವೆಚ್ಚದಲ್ಲಿನ ಏರಿಕೆ ಸರಿದೂಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಕಂಪನಿ ಕಳೆದ ತಿಂಗಳ ಘೋಷಣೆ ಮಾಡಿತ್ತು. ಅದರಂತೆ ಇದೀಗ ಬೆಲೆ ಏರಿಕೆ ಹೆಚ್ಚಿಸಿದೆ.
ಕೋವಿಡ್ ಹಾಗೂ ಹಣದುಬ್ಬರ ಕಾರಣದಿಂದಾಗಿ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿರುವ ಕಾರಣ, ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಕಂಪನಿಯಲ್ಲಿ ತಯಾರುಗೊಳ್ಳುತ್ತಿರುವ ಅಲ್ಟೋದಿಂದ ಹಿಡಿದು ಎಸ್ ಕ್ರಾಸ್ ಮಾಡೆಲ್ವರೆಗಿನ ಎಲ್ಲ ಕಾರುಗಳ ಮಾರಾಟ ಬೆಲೆಯೂ ಏರಿಕೆಯಾಗಿವೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ₹3.39 ಲಕ್ಷ ಕೋಟಿ ನಷ್ಟ!
ಕೋವಿಡ್ನಿಂದಾಗಿ ಕಳೆದ ವರ್ಷ ಇನ್ಪುಟ್ಗಳ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಇದು ಕಂಪನಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ, ಕಾರುಗಳ ಬೆಲೆಯಲ್ಲಿ ಸ್ವಲ್ಪಮಟ್ಟದ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರಕಟಣೆ ಹೊರಡಿಸಿದೆ. ಉತ್ಪಾದನಾ ವೆಚ್ಚ ಏರಿಕೆಯಾಗಿರುವುದರಿಂದ 2021 ಜನವರಿಯಿಂದ 2022ರ ಮಾರ್ಚ್ ವರೆಗೆ ಮಾರುತಿ ಸುಜುಕಿ ಶೇ. 8.8 ರಷ್ಟು ಏರಿಕೆ ಮಾಡಿದೆ.