ಚೆನ್ನೈ : ಇಸ್ರೇಲ್-ಹಮಾಸ್ ಯುದ್ಧದಿಂದ ಭಾರತದ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂಬ ಬಗ್ಗೆ ಅರ್ಥಶಾಸ್ತ್ರಜ್ಞರು ಕಾದು ನೋಡುತ್ತಿದ್ದಾರೆ. ಆದಾಗ್ಯೂ ಯುದ್ಧವು ಪಶ್ಚಿಮ ಏಷ್ಯಾದಾದ್ಯಂತ ಹರಡಿದರೆ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ವಿಶ್ಲೇಷಕರು. ಯುದ್ಧದಿಂದ ಪರಿಸ್ಥಿತಿಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿರುವುದರಿಂದ ಈ ಬಗ್ಗೆ ಈಗಲೇ ಮಾತನಾಡುವುದು ಕಷ್ಟ ಎಂಬುದು ಅವರ ಅಭಿಪ್ರಾಯವಾಗಿದೆ.
"ಪರಿಸ್ಥಿತಿಯು ತೀರಾ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಯುದ್ಧವು ಪಶ್ಚಿಮ ಏಷ್ಯಾದಾದ್ಯಂತ ಹರಡುವ ಸಾಧ್ಯತೆಯಿದೆ ಮತ್ತು ಹಲವಾರು ರಾಷ್ಟ್ರಗಳು ಯುದ್ಧದಲ್ಲಿ ಭಾಗಿಯಾಗಬಹುದು. ಇದರಿಂದ ಕಚ್ಚಾ ತೈಲ ಪೂರೈಕೆಯಲ್ಲಿ ಸಮಸ್ಯೆಗಳು ಎದುರಾಗಬಹುದು. ಒಪೆಕ್ + (ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಇತರ ತೈಲ ಉತ್ಪಾದಿಸುವ ದೇಶಗಳು) ತೈಲ ಪೂರೈಕೆ ಕಡಿತವು ಈಗಾಗಲೇ ಜಾಗತಿಕವಾಗಿ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ" ಎಂದು ಅಕ್ಯೂಟ್ ರೇಟಿಂಗ್ಸ್ & ರಿಸರ್ಚ್ ಲಿಮಿಟೆಡ್ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ಮುಖ್ಯಸ್ಥ ಸುಮನ್ ಚೌಧರಿ ಐಎಎನ್ಎಸ್ಗೆ ತಿಳಿಸಿದ್ದಾರೆ.
ಭೌಗೋಳಿಕ-ರಾಜಕೀಯ ಸಂಘರ್ಷದ ಹೆಚ್ಚಳದ ಮಧ್ಯೆ ಹಣದುಬ್ಬರ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಏರಿಳಿತಗಳ ಕಾರಣದಿಂದ ಜಾಗತಿಕ ಆರ್ಥಿಕತೆ ಮತ್ತು ವ್ಯಾಪಾರ ಮತ್ತಷ್ಟು ಮಂದಗತಿಯನ್ನು ಎದುರಿಸಬಹುದು. ಇದು ರೂಪಾಯಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಚೌಧರಿ ಹೇಳಿದರು. "ಆದಾಗ್ಯೂ, ಇಸ್ರೇಲ್ನೊಂದಿಗೆ ಭಾರತದ ವ್ಯಾಪಾರವು 10 ಬಿಲಿಯನ್ ಡಾಲರ್ಗಿಂತ ಸ್ವಲ್ಪ ಹೆಚ್ಚಾಗಿರುವುದರಿಂದ ಸಂಘರ್ಷದ ನೇರ ಪರಿಣಾಮವು ಸೀಮಿತವಾಗಿರುತ್ತದೆ. ಇಸ್ರೇಲ್ಗೆ ಭಾರತದಿಂದ ರಫ್ತು 8.5 ಬಿಲಿಯನ್ ಡಾಲರ್ ಮತ್ತು ಆಮದು 2.3 ಬಿಲಿಯನ್ ಡಾಲರ್ ಆಗಿದೆ" ಎಂದು ಚೌಧರಿ ಹೇಳಿದರು.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಮಾತನಾಡಿ, "ತೈಲ ಬೆಲೆ ಹಾಗೂ ನಂತರ ಕರೆನ್ಸಿ ಈ ಅಂಶಗಳೇ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಾಗಿವೆ" ಎಂದು ತಿಳಿಸಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಸಂಭಾವ್ಯ ಕ್ರಮದ ಬಗ್ಗೆ ಮಾತನಾಡಿದ ಚೌಧರಿ, ಆರ್ಬಿಐ ವಿಕಸನಗೊಳ್ಳುತ್ತಿರುವ ಸನ್ನಿವೇಶವನ್ನು ಮಾತ್ರ ಗಮನಿಸುತ್ತದೆ ಮತ್ತು ಈ ಸಮಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎಂದು ಹೇಳಿದರು.
"ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿದರೆ ಮತ್ತು ಹೊಸ ಪೂರೈಕೆ ಅಡೆತಡೆಗಳು ಎದುರಾದರೆ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಭಾರತ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು" ಎಂದು ಚೌಧರಿ ತಿಳಿಸಿದರು. ಮತ್ತೊಂದೆಡೆ ಯುದ್ಧದಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : ನೆಟ್ಫ್ಲಿಕ್ಸ್ನ ವ್ಯವಹಾರ ವಿಸ್ತರಣೆಗೆ ಅಡ್ಡಿಯಾದ ಲೋಕಲ್ ಕಂಟೆಂಟ್ ಕೊರತೆ