ನವದೆಹಲಿ: ರೈಲು ಟಿಕೆಟ್ ಬುಕ್ ಮಾಡುವುದೊಂದು ಪ್ರಯಾಸದ ಕೆಲಸ. ತಿಂಗಳ ಮುಂಚೆಯೇ ಟಿಕೆಟ್ ಕಾಯ್ದಿರಿಸಬೇಕು. ಪೂರ್ವಯೋಜಿತ ಯೋಜನೆ ಇದ್ದವರಿಗೆ ಇದು ದೊಡ್ಡ ಸಮಸ್ಯೆ ಆಗಲಾರದು. ನಿಜವಾದ ಸಮಸ್ಯೆ ಎಂದರೆ ತಕ್ಷಣ ಅಥವಾ ಕೆಲವು ಗಂಟೆಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವುದು. ಅದೇ ಸಮಯದಲ್ಲಿ ಬ್ಯಾಂಕ್ ಸರ್ವರ್ ಡೌನ್ ಆದ್ರೆ ಕಥೆ ಮುಗೀತು. ಟಿಕೆಟ್ ಲಭ್ಯವಿದ್ದರೂ ಬುಕ್ಕಿಂಗ್ ಸಾಧ್ಯವಾಗುವುದಿಲ್ಲ.
ಕೆಲವೊಮ್ಮೆ ನಾವು ಬುಕ್ ಮಾಡಿದ ಟಿಕೆಟ್ ರದ್ದುಗೊಳಿಸಬೇಕಾದ ಸ್ಥಿತಿಯೂ ಬರುತ್ತದೆ. ನಾವು ಟಿಕೆಟ್ ರದ್ದುಗೊಳಿಸಿದ್ರೂ ಕೆಲವು ದಿನಗಳ ನಂತರವೇ ಹಣ ನಮ್ಮ ಖಾತೆಗೆ ವಾಪಸ್ ಆಗುತ್ತದೆ. ಇಂತಹ ಸಮಸ್ಯೆಗಳಿಗೆ IRCTC ಇ-ವ್ಯಾಲೆಟ್ ಒಂದೊಳ್ಳೆ ಪರಿಹಾರ ಮಾರ್ಗ. ಇ-ವ್ಯಾಲೆಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಗ್ರಾಹಕರಿಗೆ ಬಹಳ ಉಪಯೋಗಕಾರಿ. ಅನೇಕ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಟೂರಿಸಂ ಕಾರ್ಪೊರೇಷನ್ (IRCTC) ಪ್ರಯಾಣಿಕರು ಟಿಕೆಟ್‌ಗಳನ್ನು ಬುಕ್ ಮಾಡಲು ಅನುವಾಗುವಂತೆ ಈ ಸೇವೆ ಒದಗಿಸಿದೆ.
ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಹೆಚ್ಚಿನ ಜನರು ಬ್ಯಾಂಕ್ ಸರ್ವರ್ ಡೌನ್ ಸಮಸ್ಯೆ ಎದುರಿಸುತ್ತಾರೆ. ಹೀಗಾದಲ್ಲಿ ಟಿಕೆಟ್ ಬುಕ್ಕಿಂಗ್ ಬಹುತೇಕ ಅಸಾಧ್ಯವೆಂದೇ ಹೇಳಬೇಕು. ಇ-ವ್ಯಾಲೆಟ್ ಇವುಗಳಿಗೆ ಫುಲ್ಸ್ಟಾಪ್ ಇಡುತ್ತದೆ. ಇ-ವ್ಯಾಲೆಟ್ ವಿಶೇಷವಾಗಿ ತತ್ಕಾಲ್ ಬುಕ್ಕಿಂಗ್ ಸಮಯದಲ್ಲಿ ಸೆಕೆಂಡುಗಳಲ್ಲಿ ಟಿಕೆಟ್ ಬುಕ್ ಮಾಡಲು ಉಪಯುಕ್ತ. ಸಾಮಾನ್ಯವಾಗಿ ರೈಲು ಟಿಕೆಟ್ ರದ್ದುಗೊಳಿಸಿ ಕೆಲವು ದಿನಗಳ ನಂತರ ಹಣ ಖಾತೆಗೆ ಜಮಾ ಆಗುತ್ತದೆ. ಇದರರ್ಥ ನಮ್ಮ ಹಣವನ್ನು IRCTC ಯಲ್ಲಿ ಕೆಲವು ದಿನಗಳವರೆಗೆ ಲಾಕ್ ಮಾಡಲಾಗುತ್ತದೆ. ಆ ಬಳಿಕ ನಾವು ಇನ್ನೊಂದು ಟಿಕೆಟ್ ಕೊಳ್ಳಬೇಕಾದರೆ ಮತ್ತೆ ನಮ್ಮ ಹಣವನ್ನೇ ಬಳಸಬೇಕು. ಆದರೆ, ಇ-ವ್ಯಾಲೆಟ್‌ನಿಂದ ಬುಕ್ ಮಾಡಿದ ಟಿಕೆಟ್‌ಗಳನ್ನು ನೀವು ರದ್ದುಗೊಳಿಸಿದರೆ ಹಣವನ್ನು ತಕ್ಷಣವೇ ವ್ಯಾಲೆಟ್‌ಗೆ ಜಮಾ ಮಾಡಲಾಗುತ್ತದೆ. ಆಗ ನೀವು ಇನ್ನೊಂದು ಟಿಕೆಟ್ ಬುಕ್ ಮಾಡಲು ಇ-ವ್ಯಾಲೆಟ್ ಹಣವನ್ನು ಸುಲಭವಾಗಿ ಪಡೆಯಬಹುದಾಗಿದೆ.
ಇ-ವ್ಯಾಲೆಟ್ ಮೂರು ವರ್ಷಗಳ ಮಾನ್ಯತೆ ಹೊಂದಿದೆ. ಇದಾದ ನಂತರ ಖಾತೆಯನ್ನು ನವೀಕರಿಸಬಹುದು. ಅದಕ್ಕಾಗಿ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ. ಇ-ವ್ಯಾಲೆಟ್ ತೆರೆಯಲು ಬಳಕೆದಾರನ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ IRCTC ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. eWallet ಮೆನುವಿನಲ್ಲಿ Now register ಎಂಬ ಬಟನ್ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ. ಇ-ವ್ಯಾಲೆಟ್ ನೋಂದಣಿಗೆ ರೂ.50 ಪಾವತಿಸಿ. ಆಗ ನಿಮ್ಮ ನೋಂದಣಿ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ನೀವು ಪರದೆಯ ಮೇಲೆ ನೋಡುವಿರಿ.
ಇ-ವ್ಯಾಲೆಟ್‌ಗೆ ನಿಮಗೆ ಬೇಕಾದಷ್ಟು ಮೊತ್ತವನ್ನೂ ಸೇರಿಸಬಹುದು. ಇದಕ್ಕಾಗಿ 'IRCTC eWallet' ಮೆನುವಿನಲ್ಲಿ 'IRCTC eWallet Deposit' ಮೇಲೆ ಕ್ಲಿಕ್ಕಿಸಿ. ಕನಿಷ್ಠ ರೂ.100 ಮತ್ತು ಗರಿಷ್ಠ ರೂ.10,000 ಠೇವಣಿ ಇಡಬಹುದು. ಈ ಮೊತ್ತವನ್ನು ರೈಲ್ವೆಯಲ್ಲಿ ಟಿಕೆಟ್ ಖರೀದಿಯ ಸಮಯದಲ್ಲಿ ಬಳಸಬಹುದು. ಇ-ವ್ಯಾಲೆಟ್ ಪಾಸ್‌ವರ್ಡ್ ಹೊಂದಿದೆ. ಬುಕ್ಕಿಂಗ್ ಪಾವತಿಯ ಸಮಯದಲ್ಲಿ ಇದನ್ನು ನಮೂದಿಸಬೇಕು.
ಇದನ್ನೂ ಓದಿ: ಟ್ರಾವೆಲ್ ನೌ ಪೇ ಲೇಟರ್ ಸ್ಕೀಮ್ ಜಾರಿಗೆ ತಂದ ಇಂಡಿಯನ್ ರೈಲ್ವೆ: ಇದರ ವಿಶೇಷತೆ ಏನ್ ಗೊತ್ತಾ?