ನವದೆಹಲಿ: ಭಾರತವು 2030ರ ವೇಳೆಗೆ 7 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ನಿರೀಕ್ಷೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಭವಿಷ್ಯ ನುಡಿದಿದ್ದಾರೆ. ಮಾರ್ಚ್ 2023 ರ ವೇಳೆಗೆ ದೇಶದ ಜಿಡಿಪಿ ಗಾತ್ರವು 3.5 ಟ್ರಿಲಿಯನ್ ಡಾಲರ್ ಆಗುವ ಸಾಧ್ಯತೆಯಿದೆ ಎಂದು ಅವರು ಇದೇ ವೇಳೆ ಹೇಳಿದರು. ಕಳೆದ 30 ವರ್ಷಗಳಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ಭಾರತದ ಡಾಲರ್ ಮತ್ತು ಜಿಡಿಪಿ ಶೇಕಡಾ 9 ರಷ್ಟಿದೆ. ರೂಪಾಯಿ ಬಲಗೊಂಡಿದೆ ಮತ್ತು ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಎರಡಂಕಿಯ ದರದಲ್ಲಿ ಬೆಳವಣಿಗೆ ಕಂಡಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಸಾಮಾನ್ಯವಾಗಿ ನಾವು ಡಾಲರ್ ಲೆಕ್ಕದಲ್ಲಿ ಶೇಕಡಾ 10 ರಷ್ಟು ಬೆಳವಣಿಗೆ ದರವನ್ನೇ ತೆಗೆದುಕೊಂಡರೆ, ಏಳು ವರ್ಷಗಳಲ್ಲಿ ಮೌಲ್ಯವು ದ್ವಿಗುಣಗೊಳ್ಳುತ್ತದೆ. ಹಾಗಾಗಿ ಭಾರತದ ಡಾಲರ್ GDP 2023 ರ ಏಪ್ರಿಲ್ನಿಂದ ವಾರ್ಷಿಕ ಶೇಕಡಾ 10 ರಷ್ಟು ಬೆಳವಣಿಗೆಯಾದರೂ 2030 ರ ವೇಳೆಗೆ ಅದು 7 ಟ್ರಿಲಿಯನ್ ಆರ್ಥಿಕತೆ ಆಗಿ ಬೆಳವಣಿಗೆ ಹೊಂದಲಿದೆ ಎಂದು ನಾಗೇಶ್ವರನ್ ಅವರು ಹೇಳಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ದೇಶದ ಮುಖ್ಯ ಆರ್ಥಿಕ ಸಲಹೆಗಾರರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಆರ್ಥಿಕ ಬೆಳವಣಿಗೆ ಮುನ್ಸೂಚನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 7 ಶೇಕಡಾ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. "ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಬೆಳವಣಿಗೆಯ ದರವು ಸ್ವಲ್ಪ ಕಡಿಮೆ ಇರುತ್ತದೆ. ಇತಿಹಾಸವನ್ನು ಗಮನದಲ್ಲಿಕೊಂಡು ನೋಡಿದರೆ, ಆರ್ಥಿಕ ಬೆಳವಣಿಗೆ ತುಸು ನಿಧಾನವಾಗಿರಬಹುದು. ಆದರೆ ಒಟ್ಟಾರೆಯಾಗಿ, ಆರ್ಥಿಕತೆಯು 6.5 ಪ್ರತಿಶತದಷ್ಟು ಬೆಳೆಯುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈಗಿನ ಅಂದಾಜಿನಿಗಿಂತ ಜಿಡಿಪಿ ಕಡಿಮೆಯೂ ದಾಖಲಾಗಬಹುದು: ಪ್ರಸ್ತುತ ಕೈಗಾರಿಕಾ ಉತ್ಪಾದನೆ, ಸಾಲದ ಬೆಳವಣಿಗೆ, ಖಾಸಗಿ ವಲಯದ ಹೂಡಿಕೆ, ಖಾಸಗಿ ಬಳಕೆ ಇವೆಲ್ಲವೂ ಸಮಂಜಸವಾದ ದರದಲ್ಲೇ ಬೆಳವಣಿಗೆ ಕಾಣುತ್ತಿವೆ ಮತ್ತು ಅದೇ ಪ್ರವೃತ್ತಿ ಮುಂದುವರಿಯುತ್ತದೆ ಎಂದು ನಾಗೇಶ್ವರನ್ ಹೇಳಿದ್ದಾರೆ. ನಮ್ಮ ಊಹೆ ಅನುಸಾರ ಮುಂದಿನ ವರ್ಷದಲ್ಲಿ ಆರ್ಥಿಕತೆಯು ವಾರ್ಷಿಕವಾಗಿ 6.5 ಪ್ರತಿಶತದಷ್ಟು ಬೆಳವಣಿಗೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತು ಮುಂದುವರಿಸಿದ ಅವರು, 2023-24 ನೇ ಸಾಲಿನಲ್ಲಿ ದೇಶದ ಜಿಡಿಪಿ 6 ರಿಂದ 6.8 ಪ್ರತಿಶತ ಆಗಿದೆ. ಇದರರ್ಥ ಅಪಾಯವು ಸ್ವಲ್ಪ ಹೆಚ್ಚಾಗಿದೆ. ಆದ್ದರಿಂದ ಆರ್ಥಿಕತೆಯು ಶೇಕಡಾ 6.5 ಕ್ಕಿಂತ ಕಡಿಮೆಯಿರುವ ಸಾಧ್ಯತೆಗಳೂ ಇಲ್ಲದಿಲ್ಲ ಎಂದು ಅವರು ಇದೇ ವೇಳೆ ಸ್ಪಷನೆ ಕೊಟ್ಟಿದ್ದಾರೆ. .
ವಿಶ್ವ ಬ್ಯಾಂಕ್, IMF, ಮತ್ತು ADB ಮತ್ತು RBI ನೀಡಿರುವ ವರದಿಗಳನ್ನು ನಾವು ಸ್ಥೂಲವಾಗಿ ನೋಡಬೇಕಿದೆ. ಹೀಗಾಗಿ ನಿಜವಾದ GDP ಬೆಳವಣಿಗೆ ಬಹುಶಃ ಶೇಕಡಾ 6 ರಿಂದ 6.8 ರ ವ್ಯಾಪ್ತಿಯಲ್ಲಿರುತ್ತದೆ. ಜಾಗತಿಕವಾಗಿ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳ ಪಥವನ್ನು ಇದು ಅವಲಂಬಿಸಿದೆ ಎಂದು ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ಕೇಂದ್ರ ಬಜೆಟ್ 2023: ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ನೌಕರ ವರ್ಗ