ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ 26 ರಫೇಲ್ ಎಂ ಫೈಟರ್ ಜೆಟ್ಗಳನ್ನು ಖರೀದಿಸಲು ಭಾರತ ಸರ್ಕಾರ ಅಧಿಕೃತವಾಗಿ ಫ್ರೆಂಚ್ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಕೆ ಮಾಡಿದೆ. ಸರ್ಕಾರದಿಂದ ಸರ್ಕಾರಗಳ ನಡುವೆ ಮಾಡಿಕೊಕೊಳ್ಳುವ ಒಪ್ಪಂದದ ಅಡಿಯಲ್ಲಿ ಈ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.
ಕೆಲವು ದಿನಗಳ ಹಿಂದೆಯೇ ಫ್ರೆಂಚ್ ಸರ್ಕಾರಕ್ಕೆ ಈ ಮನವಿ ಪತ್ರವನ್ನು ತಲುಪಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಉಭಯ ರಾಷ್ಟ್ರಗಳ ನಡುವೆ ನಡೆದ ಒಪ್ಪಂದದ ಅನ್ವಯ ಮನವಿ ಪತ್ರ ಸಲ್ಲಿಕೆ ಮಾಡಲಾಗಿದ್ದು, ಈ ಬಗ್ಗೆ ಫ್ರಾನ್ಸ್ ಸರ್ಕಾರ ನಿರ್ಧರಿಸಲಿದೆ. ಮುಂದಿನ ದಿನಗಳಲ್ಲಿ ಭಾರತದ ಪತ್ರಕ್ಕೆ ಅಲ್ಲಿನ ಸರ್ಕಾರ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಉನ್ನತ ರಕ್ಷಣಾ ಮೂಲಗಳು ಮಾಹಿತಿ ನೀಡಿದೆ ಎಂದು ANI ವರದಿ ಮಾಡಿದೆ.
ನೌಕಾಪಡೆಗೆ ಸಾಗರದಲ್ಲಿ ಸಮರ ಜೆಟ್ ಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು ಅನುಮೋದನೆ ನೀಡಿತ್ತು. ಫ್ರೆಂಚ್ ಮೂಲದ ಸೇನಾ ಉಪಕರಣಗಳ ಉತ್ಪಾದಕರ ಜಂಟಿ ಸಹಭಾಗಿತ್ವದಲ್ಲಿ ಮೂರು ನೂತನ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಸ್ತಾವನೆಗೂ ಮಂಡಳಿಯು ಹಸಿರು ನಿಶಾನೆ ತೋರಿಸಿತ್ತು. ಈ ಭಾಗವಾಗಿ ಫ್ರಾನ್ಸ್ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ.
ಫ್ರಾನ್ಸ್ ಸರ್ಕಾರ ಬರೆದ ಪತ್ರ ಎಲ್ಒಆರ್ ಇದ್ದಂತಿದೆ ಅಂದರೆ ಶಿಫಾರಸು ಪತ್ರದಂತಿದೆ. ಇದರಲ್ಲಿ ಭಾರತ ಸರ್ಕಾರವು ತನ್ನ ಎಲ್ಲಾ ಅಗತ್ಯತೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ದಿಷ್ಟಪಡಿಸಿದೆ. ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯಕ್ಕಾಗಿ ರಫೇಲ್ ಮೆರೈನ್ ವಿಮಾನಗಳನ್ನು ಹೊಂದಲು ಬಯಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರಪ್ರದೇಶ ವ್ಯಾಪ್ತಿಯಲ್ಲಿನ ವಾಯು ಸಮರದಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಬಲವರ್ದನೆ ಮಾಡಲಾಗುತ್ತಿದೆ. ಜೊತೆಗೆ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ನಿರ್ಮಾಣದಿಂದಾಗಿ ಸಾಗರದಾಳದ ಕಾಳಗದಲ್ಲಿ ಭಾರತೀಯ ನೌಕಾಪಡೆಯ ಸಾಮರ್ಥ್ಯ ವೃದ್ಧಿಸಲಿದೆ
ಈ ಮಧ್ಯೆ, ಭಾರತೀಯ ನೌಕಾಪಡೆ ಮತ್ತು ಭಾರತ ಸರ್ಕಾರವು ಶೀಘ್ರವಾಗಿ ಸ್ವಾಧೀನ ಒಪ್ಪಂದಕ್ಕೆ ಸಹಿ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕಾತರವಾಗಿದೆ. ಆದಷ್ಟು ಬೇಗ ಒಪ್ಪಂದದ ಪ್ರಕೀಯೆಗಳನ್ನು ಪೂರ್ಣಗೊಳಿಸಲು ವೇಗದ ಟ್ರ್ಯಾಕ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ.
ಈ ವರ್ಷದ ಜುಲೈನಲ್ಲಿ ಪ್ರಧಾನಿ ಮೋದಿ ಕೈಗೊಂಡ ಫ್ರಾನ್ಸ್ ಪ್ರವಾಸದ ವೇಳೆ ಸುಮಾರು 5.5 ಶತಕೋಟಿ ಯುರೋ ಮೌಲ್ಯದ ವಿಮಾನ ಒಪ್ಪಂದ ಮಾಡಿಕೊಳ್ಳಲಾಗಿತ್ತು, ಪ್ರಧಾನಿ ಭೇಟಿಗೆ ಮುನ್ನವೇ ರಕ್ಷಣಾ ಇಲಾಖೆ ಎಲ್ಲ ಪ್ರಕ್ರಿಯೆಗಳನ್ನು ಮಾಡಿ ಮುಗಿಸಿತ್ತು.
ಪ್ರಸ್ತಾವನೆಯ ಪ್ರಕಾರ, ಭಾರತೀಯ ನೌಕಾಪಡೆಯು ನಾಲ್ಕು ತರಬೇತುದಾರ ವಿಮಾನಗಳೊಂದಿಗೆ 22 ಏಕ-ಆಸನದ ರಫೇಲ್ ಮೆರೈನ್ ವಿಮಾನಗಳನ್ನು ಪಡೆಯಲಿದೆ. ವಿಮಾನವಾಹಕ ನೌಕೆಗಳಾದ INS ವಿಕ್ರಮಾದಿತ್ಯ ಮತ್ತು ವಿಕ್ರಾಂತ್ MiG-29 ಫೈಟರ್ ಜೆಟ್ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದೀಗ ನೌಕೆಗಳನ್ನು ಮತ್ತಷ್ಟು ಅತ್ಯಾಧುನಿಕಗೊಳಿಸಲು ರಫೇಲ್‌ಗಳ ಅಗತ್ಯವಿದೆ. ಹೀಗಾಗಿ ಈ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. (ANI)
ಇದನ್ನು ಓದಿ: ಫ್ರಾನ್ಸ್ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್ನ ರಫೇಲ್ ಫೈಟರ್ ಜೆಟ್