ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ (ಒಡೆದ ಅಕ್ಕಿ) ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಮೂಲಕ ಗೋಧಿ ಬೆನ್ನಲ್ಲೇ ಅಕ್ಕಿ ಮೇಲೂ ನಿರ್ಬಂಧ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ನಿರ್ಬಂಧ ಆದೇಶ ಇಂದಿನಿಂದಲೂ ಜಾರಿಗೊಂಡಿದ್ದರೂ, ಹಡಗುಗಳಲ್ಲಿ ಈಗಾಗಲೇ ತುಂಬಿರುವ ನುಚ್ಚಕ್ಕಿ ರಫ್ತು ಸೆಪ್ಟೆಂಬರ್ 15ರವರೆಗೆ ರವಾನೆಯಾಗಲಿದೆ. ಪ್ರಸಕ್ತ ಸಾಲಿನಲ್ಲಿ ಭತ್ತದ ನಾಟಿ ಕಡಿಮೆಯಾಗಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆಯಲ್ಲಿ ಗಣನೀಯ ಮಟ್ಟದ ಏರಿಕೆ ಕಂಡು ಬರುವ ಸಾಧ್ಯತೆ ಗೋಚರಿಸಿದೆ. ಬಾಸ್ಮತಿ ಅಲ್ಲದ ಅಕ್ಕಿಗಳ ಮೇಲೆ ಶೇ. 20ರಷ್ಟು ರಫ್ತು ಸುಂಕ ಹೆಚ್ಚಿಸಿದ್ದ ಸರ್ಕಾರ, ಇದೀಗ ಈ ನಿರ್ಧಾರ ಕೈಗೊಂಡಿದೆ. ಪಾಲಿಶ್ ಮಾಡದ ಅಥವಾ ಅರೆ ಗಿರಣಿಗಳಲ್ಲಿ ಮಾಡಿದ ಅಕ್ಕಿಗಳು ಈ ನಿಯಮಕ್ಕೆ ಒಳಗಾಗಲಿವೆ.
ಇದನ್ನೂ ಓದಿ: ಭಾರತದ ಬಾಸ್ಮತಿಗೆ ಜಾಗತಿಕ ಟ್ರೇಡಮಾರ್ಕ್; ಪಾಕ್ಗೆ ಹೊಟ್ಟೆಯುರಿ
ದೇಶದ ಅನ್ನದಾತರು ಖಾರಿಫ್ ಬೆಳೆಗಳನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಇದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಸಲ ಜೂನ್ ತಿಂಗಳಲ್ಲಿ ಮಳೆ ಸರಿಯಾಗಿ ಬಾರದ ಕಾರಣ ಅನೇಕರು ಭತ್ತ ನಾಟಿ ಮಾಡಿಲ್ಲ. ಹೀಗಾಗಿ, ಮೇ ತಿಂಗಳಲ್ಲಿ ಆಹಾರ ಭದ್ರತೆಗೆ ಅಪಾಯ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಗೋಧಿ ರಫ್ತು ನಿಷೇಧಿಸಿದ್ದ ಕೇಂದ್ರ, ದುರ್ಬಲ ರಾಷ್ಟ್ರಗಳಿಗೆ ಅಗತ್ಯ ಗೋಧಿ ಪೂರೈಕೆ ಮಾಡುವುದಾಗಿ ಹೇಳಿತ್ತು. ಇದಾದ ಬಳಿಕ ಗೋಧಿ ಹಿಟ್ಟು, ಮೈದಾ, ರವೆ ಮೇಲೂ ರಫ್ತು ನಿಷೇಧ ಹೇರಲಾಗಿತ್ತು.
ಬಾಂಗ್ಲಾದೇಶಕ್ಕೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮತ್ತು ಕರ್ನಾಟಕದಿಂದ ಅಕ್ಕಿಯನ್ನು ರಫ್ತು ಮಾಡಲಾಗುತ್ತಿದೆ. ಇದೀಗ ಆಮದು ಸುಂಕ ಕಡಿತಗೊಳಿಸಿರುವುದರಿಂದ ದೇಶದಲ್ಲಿ ಅಕ್ಕಿ ದರ ಏರಿಕೆಯಾಗಲಿದ್ದು, ಈ ರಾಜ್ಯಗಳಲ್ಲಿ ಒಂದಿಷ್ಟು ಹೆಚ್ಚು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈ ವರ್ಷ ಭತ್ತ ಬಿತ್ತನೆ ಕಡಿಮೆಯಾಗಿದ್ದೂ ದರ ಏರಿಕೆಗೆ ಕಾರಣವಾಗಿದೆ. 2021ರ ಖಾರಿಫ್‌ನಲ್ಲಿ 406.89 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯಾಗಿದ್ದರೆ, ಈ ಬಾರಿ ಸೆಪ್ಟೆಂಬರ್ 2ರವರೆಗೆ 383.99 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಈ ಮೂಲಕ ಶೇ. 5.6ರಷ್ಟು ಕಡಿಮೆ ಪ್ರಮಾಣದ ಭತ್ತದ ಕೃಷಿಯನ್ನು ರೈತರು ಮಾಡಿದ್ದು, ಒಟ್ಟು ಬೆಳೆ ಪ್ರದೇಶವು ಕಡಿಮೆಯಾಗಿದೆ.