ನವದೆಹಲಿ: ಜುಲೈ 11ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆ ನಡೆಯಲಿದೆ. ಆನ್‌ಲೈನ್ ವಹಿವಾಟು ನಡೆಸುತ್ತಿರುವ ಒಂದಕ್ಕಿಂತ ಹೆಚ್ಚು ಇ-ಕಾಮರ್ಸ್ ಕಂಪನಿಗಳಿಂದ ತೆರಿಗೆ ಸಂಗ್ರಹದ ಬಗ್ಗೆ ಸ್ಪಷ್ಟತೆ ನೀಡುವ ಸಾಧ್ಯತೆಯಿದೆ. ಈ ತೆರಿಗೆಯನ್ನು ಯಾರಿಂದ ಕಡಿತಗೊಳಿಸಬೇಕು ಎನ್ನುವ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒಎನ್‌ಡಿಸಿ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.
ಒಎನ್‌ಡಿಸಿ ಅಡಿ ಖರೀದಿದಾರನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನೊಂದಿಗೆ ಆರ್ಡರ್ ಮಾಡುತ್ತಾನೆ. ಅದು ಸ್ವತಃ ಮತ್ತೊಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ ಸರಕುಗಳನ್ನು ಖರೀದಿಸುತ್ತದೆ. ಇದರಿಂದ ಯಾವ ಟಿಸಿಎಸ್ ಕಟ್ ಆಗಲಿದೆ ಎಂಬ ಗೊಂದಲ ಅಧಿಕಾರಿಗಳಲ್ಲಿ ಮೂಡಿದೆ.
ಕೌನ್ಸಿಲ್ ಹೆಚ್ಚುವರಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್: ಜಿಎಸ್‌ಟಿ ಕೌನ್ಸಿಲ್ ಜುಲೈ 11 ರಂದು ತನ್ನ ಸಭೆಯಲ್ಲಿ ಈ ಸಂಕೀರ್ಣ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಇದರ ಹೊರತಾಗಿ, ಕೌನ್ಸಿಲ್ ಹೆಚ್ಚುವರಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸಮಸ್ಯೆಯ ಕುರಿತು ತೀರ್ಮಾನ ಸಹ ತೆಗೆದುಕೊಳ್ಳಬಹುದು. ಇದನ್ನು ವ್ಯಾಪಾರ ಘಟಕಗಳು ಕ್ಲೈಮ್ ಮಾಡಬಹುದಾ? ಕೌನ್ಸಿಲ್ ಹೊಸ ನಿಯಮವನ್ನು ರಚಿಸಬಹುದಾ? ಅದರ ಅಡಿ ಘಟಕಗಳು ಕ್ಲೈಮ್ ಮಾಡಿದ ಹೆಚ್ಚುವರಿ ಐಟಿಸಿ ಕುರಿತು ಪ್ರಶ್ನಿಸಬಹುದು. ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ಠೇವಣಿ ಇಡುವಂತೆಯೂ ಕೋರಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಮುಖ ವಿಷಯಗಳನ್ನು ಘೋಷಿಸುವ ಸಾಧ್ಯತೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಕೌನ್ಸಿಲ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದು, ಜುಲೈ 11 ರಂದು ನಡೆಯಲಿರುವ ಸಭೆಯಲ್ಲಿ ಅವರು ಹಲವು ಪ್ರಮುಖ ವಿಷಯಗಳನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ.
ಜಿಎಸ್‌ಟಿ ಸಂಗ್ರಹ ಶೇಕಡಾ 12ರಷ್ಟು ಹೆಚ್ಚಳ: ಭಾರತೀಯ ಆರ್ಥಿಕತೆಯು ಉತ್ತಮ ಸಾಧನೆ ಮಾಡುತ್ತಿದೆ. ಜೂನ್ 2023ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,61,497 ಕೋಟಿ ರೂ. ಆಗಿತ್ತು. ಜಿಎಸ್‌ಟಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ 12ರಷ್ಟು ಏರಿಕೆ ಕಂಡಿತ್ತು. ಜಿಎಸ್‌ಟಿ ತೆರಿಗೆ ನೀತಿಯನ್ನು ದೇಶದಲ್ಲಿ 6 ವರ್ಷಗಳ ಹಿಂದೆ ಜಾರಿಗೊಳಿಸಲಾಗಿತ್ತು. ಜೂನ್‌ನಲ್ಲಿ ಸಂಗ್ರಹಿಸಲ್ಪಟ್ಟ ಒಟ್ಟು 1.61 ಲಕ್ಷ ಕೋಟಿ ರೂಪಾಯಿಗಳಲ್ಲಿ, ಸಿಜಿಎಸ್‌ಟಿ 31,013 ಕೋಟಿ ರೂ., ಎಸ್‌ಜಿಎಸ್‌ಟಿ 38,292 ಕೋಟಿ ರೂ., ಐಜಿಎಸ್‌ಟಿ 80,292 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲ್ಪಟ್ಟ 39,035 ಕೋಟಿ ರೂ. ಸೇರಿದಂತೆ) ಹಾಗೂ ಸೆಸ್ 11,900 ಕೋಟಿ ರೂ. (1,028 ಕೋಟಿ ರೂ. ಸೇರಿದಂತೆ ಸರಕುಗಳ ಆಮದು ಮೇಲೆ ಸಂಗ್ರಹಿಸಲಾಗಿತ್ತು) ಆಗುತ್ತೆ.
ಜಿಎಸ್‌ಟಿ ಅಡಿ ಹಾಲಿನ ಪುಡಿ, ಸಕ್ಕರೆ, ಚಹಾ, ಖಾದ್ಯ ಸಸ್ಯಜನ್ಯ ಎಣ್ಣೆಗಳು, ಮಸಾಲೆಗಳು ಹಾಗೂ ಪಾದರಕ್ಷೆಗಳಂತಹ ವಸ್ತುಗಳಿಗೆ (500 ರೂ. ವರೆಗೆ ಬೆಲೆ) ಶೇ 5 ರಷ್ಟು ತೆರಿಗೆ ಇದೆ. ಜಿಎಸ್ಟಿಗೂ ಮುನ್ನ ಹಳೆಯ ತೆರಿಗೆ ಪದ್ಧತಿಯಲ್ಲಿ ಇವುಗಳಿಗೆ ಶೇ 6ರಿಂದ 10ರಷ್ಟು ತೆರಿಗೆ ಇತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೂನ್ 6ರಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ವಿತರಣೆಗೆ ಸುತ್ತೋಲೆ ಹೊರಡಿಸಿದ ಆರ್ಬಿಐ