ನವದೆಹಲಿ: ಕಳೆದ ಒಂದು ವರ್ಷದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಶೇಕಡಾ 21.84 ರಷ್ಟು ಹಾಗೂ ಬೆಳ್ಳಿಯ ಮೇಲಿನ ಹೂಡಿಕೆಯು ಶೇಕಡಾ 21.05 ರಷ್ಟು ಸಕಾರಾತ್ಮಕ ಆದಾಯ ನೀಡಿವೆ ಎಂದು ಮೋತಿಲಾಲ್ ಓಸ್ವಾಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ವರದಿ ತಿಳಿಸಿದೆ. ಅಕ್ಟೋಬರ್ನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯ ಪ್ರವೃತ್ತಿ ಪ್ರದರ್ಶಿಸಿವೆ. ನಿಫ್ಟಿ 50 ಸೂಚ್ಯಂಕ ಶೇಕಡಾ 2.84 ರಷ್ಟು ಇಳಿಕೆಯಾಗಿದ್ದು, ಮಿಡ್-ಕ್ಯಾಪ್ 150 ಸೂಚ್ಯಂಕ ಶೇಕಡಾ 3.80 ರಷ್ಟು ಕುಸಿತ ಕಂಡಿದೆ.
ಆದರೆ, ಕಳೆದ ದೀಪಾವಳಿಯಿಂದ ಈ ವರ್ಷದ ದೀಪಾವಳಿಯವರೆಗೆ ನೋಡಿದರೆ- ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಶೇಕಡಾ 6 ಕ್ಕಿಂತ ಹೆಚ್ಚಾಗಿವೆ. ಕಳೆದೊಂದು ವರ್ಷದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಗಣನೀಯ ಲಾಭವನ್ನು ಕಂಡಿವೆ. ಇದು ಭಾರತೀಯ ಆರ್ಥಿಕತೆಯ ದೃಢತೆ ಮತ್ತು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಷೇರು ಮಾರುಕಟ್ಟೆಯಲ್ಲಿ ರಿಯಾಲ್ಟಿ ಹೊರತುಪಡಿಸಿ ಎಲ್ಲ ವಲಯಗಳು ನಕಾರಾತ್ಮಕವಾಗಿ ಚಲಿಸಿವೆ. ಲೋಹಗಳ ವಲಯವು ತೀವ್ರ ಕುಸಿತ ಕಂಡಿದ್ದು, ಶೇಕಡಾ 6 ರಷ್ಟು ಇಳಿಕೆಯಾಗಿದೆ. ಅಮೆರಿಕದಲ್ಲಿ ಎಸ್ &ಪಿ 500 ಮತ್ತು ನಾಸ್ಡಾಕ್ 100 ಎರಡೂ ಅಕ್ಟೋಬರ್ 2023 ರಲ್ಲಿ ಶೇಕಡಾ 2 ರಷ್ಟು ಕುಸಿತ ಅನುಭವಿಸಿವೆ.
ಆರೋಗ್ಯ ಮತ್ತು ಗ್ರಾಹಕ ವಲಯವು ಎಸ್ &ಪಿ 500 ರ ಕುಸಿತಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ. ಜಾಗತಿಕವಾಗಿ, ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳು ನಕಾರಾತ್ಮಕ ಚಲನೆ ಕಂಡಿವೆ. ಇವು ಕ್ರಮವಾಗಿ ಶೇಕಡಾ 4 ಮತ್ತು 3 ರಷ್ಟು ಕುಸಿತವಾಗಿವೆ. ದಕ್ಷಿಣ ಕೊರಿಯಾ ಶೇಕಡಾ 7 ರಷ್ಟು ಗಮನಾರ್ಹ ಇಳಿಕೆಯಾದರೆ, ಸ್ವಿಟ್ಜರ್ಲೆಂಡ್ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಶೇಕಡಾ 5 ರಷ್ಟು ಇಳಿಕೆಯಾಗಿದೆ.
ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಸ್ಥಿತ್ಯಂತರಗಳು, ಯುಎಸ್ನಿಂದ ಕಡಿಮೆ ಬೇಡಿಕೆ ಮತ್ತು ಚೀನಾದ ಮಿಶ್ರ ಪ್ರವೃತ್ತಿಯ ಮಾಹಿತಿಯಿಂದಾಗಿ ಅಕ್ಟೋಬರ್ನಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 11 ರಷ್ಟು ಕುಸಿದಿವೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ ಶೇಕಡಾ 7 ಮತ್ತು ಶೇಕಡಾ 1 ರಷ್ಟು ಏರಿಕೆಯಾಗಿದ್ದು, ಸರಕುಗಳ ವಿಷಯದಲ್ಲಿ ಅಮೂಲ್ಯ ಲೋಹಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಕ್ರಿಪ್ಟೋಕರೆನ್ಸಿಗಳಾದ ಬಿಟ್ಕಾಯಿನ್ ಮತ್ತು ಎಥೆರಿಯಮ್ ಕ್ರಮವಾಗಿ ಶೇಕಡಾ 29 ಮತ್ತು ಶೇಕಡಾ 9 ರಷ್ಟು ಏರಿಕೆಯಾಗಿವೆ.
ಇದನ್ನೂ ಓದಿ : ಫೇಸ್ಬುಕ್, ಇನ್ಸ್ಟಾದಿಂದ ನೇರವಾಗಿ ಅಮೆಜಾನ್ ಶಾಪಿಂಗ್; ಬರಲಿದೆ ಹೊಸ ವೈಶಿಷ್ಟ್ಯ