ಮುಂಬೈ: ತೀವ್ರ ಹಣಕಾಸು ಬಿಕ್ಕಟ್ಟಿನಿಂದಾಗಿ ಗೋ ಫಸ್ಟ್ ಏರ್‌ಲೈನ್ಸ್ ಮೇ 3 ಮತ್ತು 4 ರಂದು ತಾತ್ಕಾಲಿಕವಾಗಿ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಿದೆ ಎಂದು ಏರ್‌ಲೈನ್ಸ್ ಮುಖ್ಯಸ್ಥ ಕೌಶಿಕ್ ಖೋನಾ ಮಂಗಳವಾರ ತಿಳಿಸಿದ್ದಾರೆ. ಕಂಪನಿಯು ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಖೋನಾ, ಪ್ರ್ಯಾಟ್ & ವಿಟ್ನಿ (P&W) ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣ ಏರ್‌ಲೈನ್ ತನ್ನ ಫ್ಲೀಟ್‌ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಇದರಿಂದ ಹಣಕಾಸು ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದರು.
ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗೆ ಸಲ್ಲಿಸುತ್ತಿರುವುದು ದುರದೃಷ್ಟಕರ ನಿರ್ಧಾರವಾಗಿದೆ, ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ಗೆ (ಡಿಜಿಸಿಎ) ವಿವರವಾದ ವರದಿಯನ್ನು ಗೋ ಫಸ್ಟ್ ಏರ್‌ಲೈನ್ಸ್ ಸಲ್ಲಿಸಲಿದೆ. ಮೇ 3 ಮತ್ತು 4 ರಂದು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗುವುದು. ಎನ್‌ಸಿಎಲ್‌ಟಿ ನಮ್ಮ ಅರ್ಜಿಯನ್ನು ಒಪ್ಪಿಕೊಂಡರೆ, ನಂತರ ವಿಮಾನಗಳನ್ನು ಪುನರಾರಂಭಿಸಲಾಗುವುದು ಎಂದು ಖೋನಾ ಹೇಳಿದರು. ಗೋ ಫಸ್ಟ್ ಏರ್‌ಲೈನ್ಸ್ 5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಮೇ 3 ಮತ್ತು 4 ರಿಂದ ಹೊಸ ಬುಕಿಂಗ್ ಅನ್ನು ಏರ್‌ಲೈನ್ ರದ್ದುಗೊಳಿಸಿದ ನಂತರ ದೇಶದ ವಾಯುಯಾನ ನಿಯಂತ್ರಕ ಡಿಜಿಸಿಎ ಗೋ ಫಸ್ಟ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಗೋ ಫಸ್ಟ್ನ ಕ್ರಮವು ನಿಯಮಗಳಿಗೆ ಅನುಗುಣವಾಗಿಲ್ಲ ಮತ್ತು ಕಂಪನಿಯ ಕ್ರಮದಿಂದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಲಿದೆ ಎಂದು ಡಿಜಿಸಿಎ ಹೇಳಿದೆ. ಗೋ ಫಸ್ಟ್ ವಿಮಾನ ಸಂಚಾರ ರದ್ದು ಮಾಡಿದ್ದನ್ನು ಹಾಗೂ ಅದಕ್ಕೆ ಕಾರಣಗಳನ್ನು ಡಿಜಿಸಿಎ ಗೆ ಲಿಖಿತವಾಗಿ ತಿಳಿಸಿಲ್ಲ.
ಗೋ ಫಸ್ಟ್ ಏರ್ಲೈನ್ಗೆ ಸರ್ಕಾರ ಸಾಧ್ಯವಿರುವ ಎಲ್ಲ ಸಹಕಾರ ನೀಡುತ್ತಿದೆ ಹಾಗೂ ಕಂಪನಿಗೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. "ಕಾರ್ಯಾಚರಣೆಯ ಅಡಚಣೆಯು ಏರ್‌ಲೈನ್‌ನ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿರುವುದು ತುಂಬಾ ದುರದೃಷ್ಟಕರ. ವಿಮಾನಯಾನ ಸಂಸ್ಥೆಯು ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ. ನ್ಯಾಯಾಂಗ ಪ್ರಕ್ರಿಯೆಯು ಅದರ ದಾರಿಯಲ್ಲಿ ಸಾಗಲು ಕಾಯುವುದು ವಿವೇಕಯುತವಾಗಿದೆ" ಎಂದು ಅವರು ಹೇಳಿದರು.
ಗೋ ಫಸ್ಟ್ ಏರ್‌ಲೈನ್ಸ್ ಕ್ಯಾಶ್ ಆ್ಯಂಡ್ ಕ್ಯಾರಿ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ ಅದು ತನ್ನ ಪ್ರತಿದಿನದ ವಿಮಾನ ಹಾರಾಟವನ್ನು ಆಧರಿಸಿ ತೈಲ ಕಂಪನಿಗಳಿಗೆ ಪೇಮೆಂಟ್ ಮಾಡುತ್ತದೆ. ಎಂಜಿನ್ ಸಮಸ್ಯೆಯ ಕಾರಣದಿಂದ ವಿಮಾನಗಳ ಹಾರಾಟ ನಿಂತು ಹೋಗಿದ್ದರಿಂದ ಈಗ ಕಂಪನಿಗೆ ಹಣಕಾಸು ಬಿಕ್ಕಟ್ಟು ಎದುರಾಗಿದೆ. ಈ ಕಾರಣದಿಂದ ಇವಾಗ ತೈಲ ಕಂಪನಿಗಳಿಗೆ ಪೇಮೆಂಟ್ ಮಾಡಲು ಕಂಪನಿಗೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ನನ್ನ 3ನೇ ಹತ್ಯಾ ಯತ್ನ ನಡೆಯಲಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆತಂಕ