ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ ಭಾರತೀಯ ಷೇರು ಮಾರುಕಟ್ಟೆಗಳಿಂದ 5,992 ಕೋಟಿ ರೂ. ಹಿಂಪಡೆದಿದ್ದಾರೆ. ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸತತ ಎರಡನೇ ತಿಂಗಳು ವಿದೇಶಿ ಹೂಡಿಕೆದಾರರು ಷೇರು ಮಾರಾಟದಲ್ಲಿ ತೊಡಗಿದ್ದಾರೆ.
ಸೆಪ್ಟೆಂಬರ್‌ನಲ್ಲಿ, ವಿದೇಶಿ ಹೂಡಿಕೆದಾರರು ಭಾರತದಲ್ಲಿ ಸುಮಾರು 7,624 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್‌ನ ಡೇಟಾ ತೋರಿಸಿದೆ. ಇಲ್ಲಿಯವರೆಗೆ 2022 ರಲ್ಲಿ 174,781 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಡಾಲರ್ಗೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಬಿಗಿಯಾದ ಹಣಕಾಸು ನೀತಿಯಿಂದಾಗಿ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ನಿರತರಾಗಿದ್ದಾರೆ ಹೂಡಿಕೆದಾರರು ಸಾಮಾನ್ಯವಾಗಿ ಸ್ಥಿರ ಮಾರುಕಟ್ಟೆಗಳನ್ನು ಬಯಸುತ್ತಾರೆ. ಅನಿಶ್ಚಿತತೆ ಹಿನ್ನೆಲೆಯಲ್ಲಿ ಹಣ ಹಿಂಪಡೆಯಲು ಬಯಸುತ್ತಾರೆ ಎಂದು ತಜ್ಞರು ಹೇಳಿದ್ದಾರೆ.
ಇದಲ್ಲದೇ ರೂಪಾಯಿ ಮೌಲ್ಯ ದಿನೇ ದಿನೇ ಕಡಿಮೆ ಆಗುತ್ತಿದ್ದು, ಭಾರತೀಯ ವಿದೇಶಿ ವಿನಿಮಯ ಸಂಗ್ರಹವು ದುರ್ಬಲವಾಗುತ್ತಿದೆ. ಇದು ಮಾರುಕಟ್ಟೆಯ ಭಾವನೆಗಳ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಕುಸಿಯುತ್ತಿರುವ ರೂಪಾಯಿಯನ್ನು ರಕ್ಷಿಸಲು ಆರ್‌ಬಿಐ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ತಿಂಗಳುಗಳಿಂದ ಖಾಲಿಯಾಗುತ್ತಲೇ ಸಾಗಿದೆ.
ರೂಪಾಯಿ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ 83 ರ ಗಡಿಯನ್ನು ಮೀರಿದೆ. ಈ ವರ್ಷ ಇಲ್ಲಿಯವರೆಗೆ, ರೂಪಾಯಿ ಮೌಲ್ಯವು ಸುಮಾರು 11-12 ಪ್ರತಿಶತದಷ್ಟು ಕುಸಿದಿದೆ ಎಂದು ಮಾರುಕಟ್ಟೆಯ ಅಂಕಿ - ಅಂಶಗಳನ್ನು ನೀಡಿದೆ. ಅಕ್ಟೋಬರ್ 14 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಎರಡು ವರ್ಷಗಳ ಕನಿಷ್ಠ USD 528.367 ಶತಕೋಟಿಗೆ ಕುಸಿದಿದೆ. ಹಿಂದಿನ ವಾರಕ್ಕಿಂತ USD 4.5 ಶತಕೋಟಿ ಕಡಿಮೆ ಆಗಿದೆ. ಇದನ್ನು ಓದಿ: ಸಾರಿಗೆ ಸಚಿವರ ಎಚ್ಚರಿಕೆಗೆ ಖಾಸಗಿ ಬಸ್ ಮಾಲೀಕರು ಡೋಂಟ್ ಕೇರ್.. ಪ್ರಯಾಣಿಕರ ಸುಲಿಗೆಗೆ ಬೀಳದ ಬ್ರೇಕ್