ನವದೆಹಲಿ: ದೃಢವಾದ ಜಿಡಿಪಿ ದೃಷ್ಟಿಕೋನ, ಮಧ್ಯಮ ಪ್ರಮಾಣದ ಹಣದುಬ್ಬರ ಮತ್ತು ವಿದೇಶಿ ಹೂಡಿಕೆದಾರರ ಬಲವಾದ ಖರೀದಿಗಳು ಸೇರಿದಂತೆ ವಿವಿಧ ಸಕಾರಾತ್ಮಕ ಅಂಶಗಳಿಂದಾಗಿ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಬೆಳಗ್ಗೆ ಸ್ವಲ್ಪಮಟ್ಟಿಗೆ ಏರಿಕೆ ಕಂಡವು. ಈ ಬೆಳವಣಿಗೆ ಹೂಡಿಕೆದಾರರಿಗೆ ಆಶಾದಾಯಕವಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿವೆ.
ಪ್ರಸ್ತುತ ಸಮಯದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 0.1 ರಿಂದ 0.2 ರಷ್ಟು ಹೆಚ್ಚಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಬಡ್ಡಿದರವನ್ನು ಹೆಚ್ಚಿಸಿದ ನಂತರ ಅಂತಿಮವಾಗಿ ಬಡ್ಡಿದರ ಏರಿಸುವ ಕ್ರಮಕ್ಕೆ ವಿರಾಮ ನೀಡಿದ ಅಮೆರಿಕದ ಸೆಂಟ್ರಲ್ ಬ್ಯಾಂಕ್ ನೀತಿ ಕೂಡ ಹೂಡಿಕೆದಾರರಲ್ಲಿ ಭರವಸೆ ಹುಟ್ಟಿಸಿದೆ.
ಅಮೆರಿಕ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ಸಮಿತಿಯು ಬುಧವಾರದ ತನ್ನ ಇತ್ತೀಚಿನ ಸಭೆಯಲ್ಲಿ ಪ್ರಮುಖ ಬಡ್ಡಿದರವನ್ನು ಸ್ಥಿರವಾಗಿರಿಸಿದೆ. ಪಾಲಿಸಿ ದರವನ್ನು 5.0 ರಿಂದ 5.25 ಪ್ರತಿಶತದಲ್ಲಿ ನಿರ್ವಹಿಸಲಾಗಿದೆ. ಇದು ಕೋವಿಡ್-19 ನ ಆರಂಭಿಕ ಸಮಯದಲ್ಲಿ ಬಹುತೇಕ ಶೂನ್ಯದ ಸಮೀಪದಲ್ಲಿತ್ತು. ಇತ್ತೀಚಿನ ವಿರಾಮವನ್ನು ಹೊರತುಪಡಿಸಿದರೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸತತ ಹತ್ತನೇ ಬಾರಿಗೆ ಬಡ್ಡಿದರವನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು.
"ಸದ್ಯದ ಷೇರು ಮಾರುಕಟ್ಟೆಯ ರ್ಯಾಲಿಯು ಕಳೆದ ಶುಕ್ರವಾರ ಮುಕ್ತಾಯದ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು ಮತ್ತು ಈಗ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪುವ ಸನಿಹದಲ್ಲಿದೆ. ನಿಫ್ಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟ 18,887 ಆಗಿದೆ. ಈಗ ಮಾರುಕಟ್ಟೆಯಲ್ಲಿ ಎರಡು ಗಮನಾರ್ಹ ಪ್ರವೃತ್ತಿಗಳಿವೆ: ಒಂದು, ಈ ರ‍್ಯಾಲಿಯು ವಿಶಾಲ ವಲಯಗಳ ಮೇಲೆ ಆಧಾರಿತವಾಗಿದೆ. ಅಂದರೆ ಲಾರ್ಜ್ ಕ್ಯಾಪ್ ಐಟಿ ಹೊರತುಪಡಿಸಿ ಹೆಚ್ಚಿನ ವಲಯಗಳ ಭಾಗವಹಿಸುವಿಕೆ. ಎರಡನೆಯದಾಗಿ, ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳು ಲಾರ್ಜ್ ಕ್ಯಾಪ್‌ಗಳನ್ನು ಮೀರಿಸುತ್ತಿವೆ" ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.
ಷೇರು ಮಾರುಕಟ್ಟೆಗಳು ಆರು ತಿಂಗಳ ನಂತರ ಈಗ ಹೊಸ ಗರಿಷ್ಠ ಮಟ್ಟಕ್ಕೇರುವ ಸನಿಹದಲ್ಲಿವೆ. ಸದ್ಯದ ಟ್ರೆಂಡ್ಗಳ ಪ್ರಕಾರ ಏರಿಕೆ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಎಂದು ರೆಲಿಗೇರ್ ಬ್ರೋಕಿಂಗ್ ನ ತಾಂತ್ರಿಕ ಸಂಶೋಧನೆ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಅಜಿತ್ ಮಿಶ್ರಾ ಹೇಳಿದರು.
ಸೆನ್ಸೆಕ್ಸ್, ಇದು BSE ಯ ಮಾರುಕಟ್ಟೆ ಸೂಚ್ಯಂಕವಾಗಿದ್ದು, ಇದನ್ನು S&P BSE ಸೆನ್ಸೆಕ್ಸ್ ಎಂದೂ ಕರೆಯುತ್ತಾರೆ. ಇದು ಭಾರತದ ಅತ್ಯಂತ ಹಳೆಯ ಮಾರುಕಟ್ಟೆ ಸೂಚ್ಯಂಕಗಳಲ್ಲಿ ಒಂದಾಗಿದೆ. ಸೆನ್ಸೆಕ್ಸ್ ಎಂದರೆ ಸ್ಟಾಕ್ ಎಕ್ಸ್ಚೇಂಜ್ ಸೆನ್ಸಿಟಿವಿಟಿ ಇಂಡೆಕ್ಸ್ ಎಂದರ್ಥ. ಇದು ಟ್ರೇಡಿಂಗ್ಗಾಗಿ BSE ಯೊಂದಿಗೆ ಪಟ್ಟಿ ಮಾಡಲಾದ ಟಾಪ್ 30 ಕಂಪನಿಗಳನ್ನು ಒಳಗೊಂಡಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಸ್ಟಾಕ್ ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿಯ ಪೂರ್ಣ ಹೆಸರು ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ ಫಿಫ್ಟಿ ಆಗಿದೆ. ನಿಫ್ಟಿಯು ಎನ್‌ಎಸ್‌ಇಯಲ್ಲಿ ವಹಿವಾಟು ನಡೆಸುವ ಟಾಪ್ 50 ಕಂಪನಿಗಳನ್ನು ಒಳಗೊಂಡಿದೆ. ನಿಫ್ಟಿಯನ್ನು ಲೆಕ್ಕಾಚಾರ ಮಾಡಲು ಬಳಸುವ ವಿಧಾನವು ಸೆನ್ಸೆಕ್ಸ್‌ನಂತೆಯೇ ಇರುತ್ತದೆ.
ಇದನ್ನೂ ಓದಿ : Work Culture: ಕೆಲಸ ಮಾಡುವ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ ಎಂದ ಶೇ 86ರಷ್ಟು ಉದ್ಯೋಗಿಗಳು