ನವದೆಹಲಿ: ರಫ್ತು ನಿರ್ಬಂಧಗಳ ಮಧ್ಯೆ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 2,410 ರೂ. ದರದಲ್ಲಿ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು (ಮಂಗಳವಾರ) ಹೇಳಿದ್ದಾರೆ. "ಎನ್ಸಿಸಿಎಫ್ ಮತ್ತು ನಾಫೆಡ್ ಸೋಮವಾರ ದೇಶಾದ್ಯಂತ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭಿಸಿದ್ದವು. ಇಂದು ಮತ್ತಷ್ಟು ಉತ್ತೇಜನಕಾರಿ ಕ್ರಮಗಳನ್ನು ಘೋಷಿಸುತ್ತಿದ್ದೇವೆ. ಗ್ರಾಹಕರು ಮತ್ತು ರೈತರು ಇಬ್ಬರೂ ನಮಗೆ ಅಮೂಲ್ಯ. ರೈತರು ಯಾವುದೇ ಚಿಂತೆ ಮಾಡದೆ ತಾವು ಬೆಳೆದ ಈರುಳ್ಳಿಯನ್ನು ಉತ್ತಮ ಬೆಲೆಗೆ ಸರ್ಕಾರಕ್ಕೆ ಮಾರಾಟ ಮಾಡಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ರೈತರು ಚಿಂತಿಸಬೇಕಾಗಿಲ್ಲ. ಆತಂಕದಿಂದ ಈರುಳ್ಳಿ ಮಾರುವುದು ಅಗತ್ಯವಿಲ್ಲ. ನಾನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇನೆ. ಅಜಿತ್ ಪವಾರ್ ಮತ್ತು ನಾನು ಹಲವಾರು ಬಾರಿ ಮಾತನಾಡಿದ್ದೇವೆ. ಮಹಾರಾಷ್ಟ್ರ ಕೃಷಿ ಸಚಿವರು ಮತ್ತು ಇತರ ಹಲವಾರು ರಾಜ್ಯ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇನೆ" ಎಂದು ಕೇಂದ್ರ ವಾಣಿಜ್ಯ ಸಚಿವರು ತಿಳಿಸಿದರು.
ಈರುಳ್ಳಿ ಕೆ.ಜಿ ₹40: ಬೆಲೆಗಳನ್ನು ಸ್ಥಿರವಾಗಿಡಲು ಕೇಂದ್ರವು ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. "ಈರುಳ್ಳಿ ಬೆಲೆ ಏರಿಕೆಯಾಗಿರುವ ಪ್ರದೇಶಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುತ್ತೇವೆ" ಎಂದು ಗೋಯಲ್ ಹೇಳಿದರು. ಸದ್ಯ ಈರುಳ್ಳಿ ಬೆಲೆ ಕೆ.ಜಿ.ಗೆ 30 ರೂ.ಗಳಿಂದ 40 ರೂ.ಗೆ ಏರಿದೆ.
"ಆಗಸ್ಟ್ 17 ರಂದು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ತೆರಿಗೆ ವಿಧಿಸಲಾಗಿದೆ. ಇದರೊಂದಿಗೆ, ಎನ್ಸಿಸಿಎಫ್ ಮತ್ತು ನಾಫೆಡ್ 3 ಲಕ್ಷದ ಬದಲು 5 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಲಿವೆ. ಹೀಗಾಗಿ ನಮ್ಮ ರೈತರಿಗೆ ಯಾವುದೇ ತೊಂದರೆಯಾಗದು. ಎರಡು ಲಕ್ಷ ಟನ್ ಈರುಳ್ಳಿಯನ್ನು ಪ್ರತಿ ಕ್ವಿಂಟಾಲ್‌ಗೆ 2,410 ರೂ.ಗೆ ಖರೀದಿಸಲಿದ್ದು, ಎನ್ಸಿಸಿಎಫ್ ಮತ್ತು ನಾಫೆಡ್ ಎರಡೂ ವಿವಿಧ ಪ್ರದೇಶಗಳಲ್ಲಿನ ಗ್ರಾಹಕರಿಗೆ 25 ಕೆಜಿ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಿವೆ. ಈ ಸಬ್ಸಿಡಿಯನ್ನು ಸರ್ಕಾರ ಭರಿಸಲಿದೆ" ಎನ್ನುವುದು ಸಚಿವರ ಹೇಳಿಕೆ.
ಈರುಳ್ಳಿ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈರುಳ್ಳಿಯ ದೇಶೀಯ ಲಭ್ಯತೆಯನ್ನು ಸುಧಾರಿಸಲು ಕೇಂದ್ರವು ಆಗಸ್ಟ್ 19 ರಂದು ಡಿಸೆಂಬರ್ 31 ರವರೆಗೆ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿತ್ತು. ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ನಾಸಿಕ್ನ ಲಾಸಲ್ಗಾಂವ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯು ರಫ್ತು ಸುಂಕ ವಿಧಿಸುವ ಕೇಂದ್ರದ ನಿರ್ಧಾರ ವಿರೋಧಿಸಿ ಈರುಳ್ಳಿ ವ್ಯಾಪಾರವನ್ನು ಅನಿರ್ದಿಷ್ಟವಾಗಿ ನಿಲ್ಲಿಸಿದೆ.
ಇದನ್ನೂ ಓದಿ : ಮೆಕ್ಸಿಕೊದಲ್ಲಿ ಭಾರತೀಯ ಪ್ರಜೆಗೆ ಗುಂಡು ಹಾರಿಸಿ ಹತ್ಯೆ; ಮತ್ತೋರ್ವನಿಗೆ ಗಾಯ