ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಮುಖ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಚೆಸ್ ದಿನದಂದು ಅವರು ಚೆಸ್ ಆಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಅವರ ಹನಿಮೂನ್ಗೆ ತೆರಳಿದ್ದ ಸಮಯದಲ್ಲಿ ತೆಗೆದ ಫೋಟೋ ಆಗಿದೆ. ಆ ನಿಟ್ಟಿನಲ್ಲಿ ಮಹೀಂದ್ರಾ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
ಗ್ಲೋಬಲ್ ಚೆಸ್ ಲೀಗ್ ನಡೆದಾಗ ಎಲ್ಲರೂ ನನಗೆ "ನೀವು ಎಂದಾದರೂ ಚೆಸ್ ಆಡಿದ್ದೀರಾ? ಅಂತಾ ಪ್ರಶ್ನಿಸುತ್ತಿದ್ದರು. ಹೀಗಾಗಿ ನಾನು ನನ್ನ ಹಳೆಯ ಆಲ್ಬಮ್ ಅನ್ನು ಹುಡುಕಿದೆ. ಆಗ ಈ ಫೋಟೋ ಸಿಕ್ಕಿತು. ಇದು ಆಗ್ರಾದಲ್ಲಿ ನನ್ನ ಹನಿಮೂನ್ ಸಮಯದಲ್ಲಿ ತೆಗೆದ ಫೋಟೋ ಆಗಿದೆ. ರೊಬೊಟಿಕ್ ಚೆಸ್ ಬೋರ್ಡ್‌ನಲ್ಲಿ ಆಡಿದ ಫೋಟೋ ಅಲ್ಲ. ಈ ಫೋಟೋ ನನ್ನ ಹೆಂಡತಿ ಕ್ಲಿಕ್ ಮಾಡಿದ್ದು, ಆ ಫೋಟೋಗೆ ನಾನು ಪೋಸ್ ನೀಡಿದ್ದೇನೆ ಎಂದು ಹೇಳಿದರು.
ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸುಮಾರು ಮೂರು ಲಕ್ಷ ಮಂದಿ ವೀಕ್ಷಿಸಿದ್ದಾರೆ. "ನಿಮ್ಮ ಹಳೆಯ ಫೋಟೋ ತುಂಬಾ ಚೆನ್ನಾಗಿದೆ" ಎಂದು ಅನೇಕ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಗ್ಲೋಬಲ್ ಚೆಸ್ ಲೀಗ್ ಅನ್ನು ಈ ವರ್ಷ ಮೊದಲ ಬಾರಿಗೆ ಟೆಕ್ ಮಹೀಂದ್ರಾ ಮತ್ತು ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಜಂಟಿಯಾಗಿ ಆಯೋಜಿಸಿದೆ. ಇದು ಆರು ಫ್ರಾಂಚೈಸಿಗಳನ್ನು ಹೊಂದಿದೆ. ಈ ವರ್ಷ ಜೂನ್ 21 ರಿಂದ ಜುಲೈ 2 ರವರೆಗೆ ದುಬೈನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಹಳೆಯ ಆಲ್ಬಮ್‌ಗಳು ನಿಧಿಗಳಾಗಿವೆ. ಎಲ್ಲರೂ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ, ಆನಂದ್ ಮಹೀಂದ್ರಾ ಕೂಡ ಹಳೆಯ ಆಲ್ಬಂ ತೆಗೆದು ಚೆಸ್ ಆಡುತ್ತಿದ್ದ ಫೋಟೋವನ್ನು ತಮ್ಮ ಆಲ್ಬಂನಲ್ಲಿ ಹುಡುಕಿದರು. ಪ್ರತಿ ಫೋಟೋದ ಹಿಂದೆ ಯಾವಾಗಲೂ ಒಂದು ನೆನಪು ಇರುತ್ತದೆ. ನಾವು ಫೋಟೋವನ್ನು ನೋಡಿದಾಗಲೆಲ್ಲ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತೇವೆ. ಆನಂದ್ ಮಹೀಂದ್ರಾ ಆ ಫೋಟೋವನ್ನು ಕಂಡು ನೆಟಿಜನ್‌ಗಳೊಂದಿಗೆ ತಮ್ಮ ನಾಸ್ಟಾಲ್ಜಿಕ್ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಜುಲೈ 20 ರಂದು ವಿಶ್ವ ಚೆಸ್ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಬುದ್ಧಿವಂತರ ಆಟ ಎಂದು ಕರೆಸಿಕೊಳ್ಳುವ ಚದುರಂಗದಾಟ ಮಹಾಭಾರತ ಕಾಲದಿಂದಲೂ ಖ್ಯಾತಿ ಪಡೆದಿದೆ. ಚದುರಂಗದಾಟ ಎಂದರೆ ನೆನಪಿಗೆ ಬರುವುದು ವಿಶ್ವನಾಥನ್ ಆನಂದ್. ಇವರು ಚೆಸ್ ಆಟದ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದವರು. ಇಂಟರ್‌ನ್ಯಾಷನಲ್ ಚೆಸ್ ಫೆಡರೇಶನ್ ಸ್ಥಾಪನೆಯ ನೆನಪಿಗಾಗಿ ಯುನೆಸ್ಕೊ 1996ರಲ್ಲಿ ಅಂತರರಾಷ್ಟ್ರೀಯ ಚೆಸ್ ದಿನವನ್ನು ಘೋಷಿಸಿತು. ಇದನ್ನು ಸಾಮಾನ್ಯವಾಗಿ ಎಫ್‌ಐಡಿಇ ಎಂದೂ ಕರೆಯಲಾಗುತ್ತದೆ.
ಎಫ್‌ಐಡಿಇ ಅನ್ನು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಎಫ್‌ಐಡಿಇ ವಿವಿಧ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್‌ಗಳನ್ನು ಸಂರ್ಪಕಿಸುವ ಜವಾಬ್ದಾರಿಯುತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಅಂತರರಾಷ್ಟ್ರೀಯ ಚೆಸ್ ಸ್ಪರ್ಧೆಗಳಿಗೆ ಆಡಳಿತ ಮಂಡಳಿಯಾಗಿ ಕಾರ್ಯ ನಿರ್ವಹಿಸುತ್ತದೆ. ಎಫ್‌ಐಡಿಇ ಅನ್ನು 1999ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಗುರುತಿಸಿತ್ತು.
ಓದಿ: 1 ಫೋಟೋ 5 ತಲೆಮಾರು: 'ಇಂಥ ಕುಟುಂಬವನ್ನು ಭಾರತದಲ್ಲೂ ನೋಡುವಾಸೆ'- ಆನಂದ್ ಮಹಿಂದ್ರಾ