ಬೆಂಗಳೂರು: ವಿಶ್ವ ಆರ್ಥಿಕ ಹಿಂಜರಿತದ ಭೀತಿ ನಡುವೆ ಬೆಂಗಳೂರು ಐಟಿ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಷ್ಟೇ ಅಲ್ಲ ಸಂಬಳ ಕಡಿತ ಮತ್ತು ವಜಾಗೊಳಿಸುವ ಭಯದಿಂದ ಟೆಕ್ಕಿಗಳು ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಂಪನಿಗಳು ನಿಧಾನವಾಗಿ ಹೈಬ್ರಿಡ್ ವರ್ಕಿಂಗ್ ಮೋಡ್‌ನಿಂದ ಹೊರ ಬರುತ್ತಿರುವುದರಿಂದ ಮತ್ತು ಕಚೇರಿಗೆ ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತಿರುವುದರಿಂದ, ದೇಶಾದ್ಯಂತದ ಟೆಕ್ಕಿಗಳು ಮತ್ತೆ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಫ್ಲಾಟ್‌ಗಳು, ಸ್ವಂತ ಮನೆಗಳು ಮತ್ತು ವಸತಿ ಕಟ್ಟಡಗಳ ಸಮುಚ್ಚಯ ಅಂದರೆ ವಿಶೇಷವಾಗಿ ಐಟಿ ಪಾರ್ಕ್‌ಗಳಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಬಹುತೇಕ ಬಾಡಿಗೆ ದುಪ್ಪಟ್ಟಾಗಿದೆ.
ಟೆಕ್ಕಿಗಳು, ವಿಶೇಷವಾಗಿ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವವರು ಅತಿಯಾದ ಬಾಡಿಗೆಯಿಂದ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವರು ತಮ್ಮ ಕೆಲಸದ ಸ್ಥಳಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕ ಹೊಂದಿರುವವರು ಮತ್ತು ಕೈಗೆಟುಕುವ ಬಾಡಿಗೆಗೆ ದೊರೆಯುವ ಮನೆಗಳಿಗಾಗಿ ದೂರದ ಪ್ರದೇಶಗಳಿಗೆ ವಲಸೆ ಹೋಗಲು ಯೋಚಿಸುತ್ತಿದ್ದಾರೆ. ಈಗಾಗಲೇ ಕುಟುಂಬ ಸಮೇತ ಇರುವವರು ಹೆಚ್ಚಿನ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದರೆ, ದುಬಾರಿ ಬಾಡಿಗೆಯಿಂದಾಗಿ ಬ್ಯಾಚಲರ್ಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಜನವರಿಯಿಂದ ಮಾರ್ಚ್‌ವರೆಗಿನ ಮ್ಯಾಜಿಕ್‌ಬ್ರಿಕ್ಸ್ ಆಸ್ತಿ ಸೂಚ್ಯಂಕದ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಸತಿ ಅಂದರೆ ಬಾಡಿಗೆ ಮನೆಗಳ ಹುಡುಕಾಟ ಶೇಕಡಾ 10.3 ರಷ್ಟು QoQ ಹೆಚ್ಚಾಗಿದೆ. ಬೆಂಗಳೂರು ಭಾರತದ ಟಾಪ್ 3 ಆದ್ಯತೆಯ ಮಹಾನಗರಗಳಲ್ಲಿ ಒಂದಾಗಿದೆ.
ಅದೇ ಸಮಯದಲ್ಲಿ, ವಸತಿ ಪೂರೈಕೆ (ಸಕ್ರಿಯ ಪಟ್ಟಿಗಳು) 1.1 ಶೇಕಡಾ QoQ ನ ಕನಿಷ್ಠ ಕುಸಿತ ಆಗಿರುವುದನ್ನ ವರದಿಯಲ್ಲಿ ಹೇಳಿದೆ. ಬೇಡಿಕೆ-ಸರಬರಾಜು ಅಸಾಮರಸ್ಯವು ಸರಾಸರಿ ಆಸ್ತಿ ದರಗಳಲ್ಲಿ 2.5 ಶೇಕಡಾ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಸರಾಸರಿ ದರಗಳು ಕ್ರಮವಾಗಿ 2.5 ಶೇಕಡಾ ಮತ್ತು 2 ಶೇಕಡಾ QoQ ನಷ್ಟು ಹೆಚ್ಚಾಗಿದೆ. ವಸತಿ ಬೇಡಿಕೆ ಶೇ 10.3 QoQ ನಷ್ಟು ಭಾರಿ ಹೆಚ್ಚಳವಾಗಿದೆ. ಇದು ಎರಡನೇ ಅತಿ ದೊಡ್ಡ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಸರ್ಜಾಪುರ ರಸ್ತೆ ಬೆಂಗಳೂರಿನ ಅತ್ಯಂತ ಆದ್ಯತೆಯ ವಸತಿ ಪ್ರದೇಶವಾಗಿ ಹೊರಹೊಮ್ಮಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 3BHK ಕಾನ್ಫಿಗರೇಶನ್ ಮನೆಗಳು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 48 ಪ್ರತಿಶತದಷ್ಟು ಪಾಲು ಹೊಂದಿವೆ. ನಂತರ 2BHK ಕಾನ್ಫಿಗರೇಶನ್ ಮನೆಗಳಿಗೆ ನಗರದಲ್ಲಿ 38 ಪ್ರತಿಶತ ಬೇಡಿಕೆ ಹೊಂದಿದ್ದು, ಶೇ 43 ರಷ್ಟು ಪೂರೈಕೆಯನ್ನು ಹೊಂದಿದೆ ಎಂದು ವರದಿಯುಲ್ಲಿ ಉಲ್ಲೇಖಿಸಲಾಗಿದೆ.
"ಜಾಗತಿಕ ಆರ್ಥೀಕ ಹಿಂಜರಿತದ ಹೊರತಾಗಿಯೂ ಭಾರತದ ಆರ್ಥಿಕತೆಯು FY23 ರಲ್ಲಿ 6-7 ಪ್ರತಿಶತದಷ್ಟು ಬೆಳವಣಿಗೆಯಾಗಲಿದೆ ಎಂದು ಹಲವಾರು ಬಹುಪಕ್ಷೀಯ ಏಜೆನ್ಸಿಗಳು ಅಂದಾಜಿಸಿವೆ. ಇತ್ತೀಚಿನ ಕೇಂದ್ರ ಬಜೆಟ್ ಹಲವಾರು ಉತ್ತೇಜಕ ಉಪಕ್ರಮಗಳನ್ನು ಪರಿಚಯಿಸಿದೆ. ಪಿಎಂಎವೈ ಮತ್ತು ಯುಐಡಿಎಫ್‌ಗೆ ಗಣನೀಯ ಪ್ರಮಾಣದ ಹಂಚಿಕೆಗಳು ಸೇರಿದಂತೆ, ಉದ್ಯೋಗಾವಕಾಶಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮ್ಯಾಜಿಕ್‌ಬ್ರಿಕ್ಸ್‌ನ ಸಿಇಒ ಸುಧೀರ್ ಪೈ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:3 ವರ್ಷಗಳಲ್ಲಿ ಶೇ 178ರಷ್ಟು ಏರಿಕೆಯಾದ ಡಿಜಿಟಲ್ ಪೇಮೆಂಟ್ಸ್